ಲಂಡನ್, ಆ 19 (DaijiworldNews/HR): ಮಕ್ಕಳ ಆರೈಕೆ ಮಾಡಬೇಕಾಗಿದ್ದ ನರ್ಸ್, ನವಜಾತ ಶಿಶುಗಳನ್ನು ಭೀಕರವಾಗಿ ಹತ್ಯೆ ಮಾಡುತ್ತಿದ್ದ ಭೀಭತ್ಸ ಘಟನೆ ಬೆಳಕಿಗೆ ಬಂದಿದ್ದು, ಯುಕೆ ಕೋರ್ಟ್ ಆಕೆಯನ್ನು ದೋಷಿ ಎಂದು ಹೇಳಿ ತೀರ್ಪು ನೀಡಿದ್ದು ಶಿಕ್ಷೆ ಇನ್ನಷ್ಟೇ ಪ್ರಕಟವಾಗಬೇಕಿದೆ.
ಚೆಸ್ಟರ್ನಲ್ಲಿರುವ ಚೆಸ್ಟರ್ ಆಸ್ಪತ್ರೆಯ ನರ್ಸ್ ಲೂಯಿ ಲೆಟ್ಟಿ (33) ಮಕ್ಕಳನ್ನು ಹತ್ಯೆ ಮಾಡಿದ್ದ ಆರೋಪಿಯಾಗಿದ್ದು ಸದ್ಯ ಈಕೆಯನ್ನು ಬಂಧಿಸಲಾಗಿದ್ದು, ಆಗಸ್ಟ್ 21ರಂದು ಮ್ಯಾಂಚೆಸ್ಟರ್ ನ್ಯಾಯಾಲಯ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ. ವಿಶೇಷ ಅಂದರೆ ಈಕೆಯ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೊದಲು ಧ್ವನಿ ಎತ್ತಿರುವುದು ಭಾರತೀಯ ಮೂಲದ ಶಿಶು ತಜ್ಞರಾಗಿರುವ ಡಾ ರವಿ ಜಯರಾಮ್.
ಆಸ್ಪತ್ರೆಯಲ್ಲಿ ಏಕಾಏಕಿ ಶಿಶು ಮರಣ ಹೆಚ್ಚಳವನ್ನು ಗಮನಿಸಿದ್ದ ಡಾ ರವಿ ಜಯರಾಮ್.ಮಾಜಿ ನರ್ಸ್ ಸಹೋದ್ಯೋಗಿ ಲೂಸಿ ಲೆಟ್ಬಿ ವರ್ತನೆ ಬಗ್ಗೆ ಆಸ್ಪತ್ರೆಯ ಮಂಡಳಿಯಲ್ಲಿ ಧ್ವನಿ ಎತ್ತಿದ್ದರು.
ನರ್ಸ್ ಲೂಯಿ ಲೆಟ್ಟಿ ಮಗು ಸಾಯಲು ನೈಸರ್ಗಿಕ ಕಾರಣಗಳಿವೆ ಎಂದು ಸಹೋದ್ಯೋಗಿಗಳನ್ನು ವಂಚಿಸುತ್ತಾ ಶಿಶುಗಳನ್ನು ಕೊಲ್ಲುತ್ತಿದ್ದುದರಿಂದ ಆಕೆ ಬಗ್ಗೆ ಮೊದ ಮೊದಲು ಅನುಮಾನ ಬಂದಿರಲಿಲ್ಲ. ನವಜಾತ ಶಿಶುಗಳ ರಕ್ತನಾಳಕ್ಕೆ ಗಾಳಿ ತುಂಬಿದ ಚುಚ್ಚುಮದ್ದು, ಜೀರ್ಣಾಂಗವ್ಯೂಹದೊಳಗೆ ಗಾಳಿ ತುಂಬುವುದು, ಹಾಲನ್ನು ಓವರ್ ಫೀಡ್ ಮಾಡುವುದು, ಇನ್ಸುಲಿನ್ ಚುಚ್ಚುಮದ್ದು ನೀಡುವುದು ಇತ್ಯಾದಿ ರೂಪದಲ್ಲಿ ಮಕ್ಕಳನ್ನು ಹತ್ಯೆ ಮಾಡುತ್ತಿದ್ದಳು.