ಲಾಹೋರ್, ಆ 05 (DaijiworldNews/AK):ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿ, ಇಸ್ಲಾಮಾಬಾದ್ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ ಎಂದು ಖಾಸಗಿ ಮಾಧ್ಯಮ ವರದಿ ಮಾಡಿದೆ.
ಇಸ್ಲಾಮಾಬಾದ್ ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹುಮಾಯೂನ್ ದಿಲಾವರ್ ಅವರು ಈ ತೀರ್ಪನ್ನು ಪ್ರಕಟಿಸಿದ್ದಾರೆ ಎನ್ನಲಾಗಿದೆ.
ಇಮ್ರಾನ್ ಖಾನ್ ಗೆ ಇಸ್ಲಾಮಾಬಾದ್ ವಿಚಾರಣಾ ನ್ಯಾಯಾಲಯವು ಐದು ವರ್ಷಗಳ ಕಾಲ ಸಕ್ರಿಯ ರಾಜಕೀಯದಲ್ಲಿ ಭಾಗವಹಿಸದಂತೆ ಇಸ್ಲಾಮಾಬಾದ್ ವಿಚಾರಣಾ ನ್ಯಾಯಾಲಯ ನಿರ್ಬಂಧಿಸಿದೆ.
ಪಾಕಿಸ್ತಾನದ ಹೈಕೋರ್ಟ್ ಶುಕ್ರವಾರ ಕೆಳ ನ್ಯಾಯಾಲಯದ ತೀರ್ಪನ್ನು ತಳ್ಳಿ ಹಾಕಿ ಇಮ್ರಾನ್ ಖಾನ್ ಅಧಿಕಾರದಲ್ಲಿದ್ದಾಗ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾದ ಭ್ರಷ್ಟಾಚಾರ ಪ್ರಕರಣದ ಮರು ವಿಚಾರಣೆಗೆ ತಿಳಿಸಿದೆ.ಇದರ ಬೆನ್ನಲ್ಲೆ ಇಂತಹ ಅಚ್ಚರಿ ಬೆಳವಣಿಗೆ ನಡೆದಿದೆ.
ಮಾಜಿ ಕ್ರಿಕೆಟ್ ಆಟಗಾರ ಮತ್ತು ರಾಜಕಾರಣಿ ಇಮ್ರಾನ್ ಖಾನ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ವಿದೇಶಿ ಗಣ್ಯರಿಂದ ಪಡೆದ ಉಡುಗೊರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪ ಸಾಬೀತಾಗಿದೆ. ಖಾನ್ ಅವರ ಸಹಾಯಕರು ದುಬೈನಲ್ಲಿ ಅವುಗಳನ್ನು ಮಾರಾಟ ಮಾಡಿದ್ದಾರೆ ಎಂದು ಈ ಹಿಂದೆ ಸರಕಾರಿ ಅಧಿಕಾರಿಗಳು ಆರೋಪಿಸಿದ್ದರು. ಇತ್ತ ಇಮ್ರಾನ್ ತಾನು ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಹೇಳಿಕೆ ನೀಡಿ ಮೇಲ್ಮನವಿಯನ್ನು ಸಲ್ಲಿಸುವುದಾಗಿ ಹೇಳಿದರು.