ಬ್ರಿಟನ್, ಜು 30 (DaijiworldNews/AK): ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ,ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರು ಬ್ರಿಟನ್ನ ಅತ್ಯುತ್ತಮ ’ಡ್ರೆಸ್ಡ್ ಫಾರ್ ಫ್ಯಾಶನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
2023 ರಲ್ಲಿ ಬ್ರಿಟನ್ನಲ್ಲಿ ಅತ್ಯುತ್ತಮ ಉಡುಪು ಧರಿಸಿರುವ ಸಾಕಷ್ಟು ಸೆಲೆಬ್ರೆಟಿಗಳನ್ನು ಹಿಂದಿಕ್ಕಿ ಜನಪ್ರಿಯ ನಿಯತಕಾಲಿಕೆ ಬಿಡುಗಡೆ ಮಾಡಿದ ಪಟ್ಟಿಯ ಅನುಸಾರ ಅಕ್ಷತಾ ಮೂರ್ತಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಬ್ರಿಟನ್ನ ಟ್ಯಾಟ್ಲರ್ ನಿಯತಕಾಲಿಕವು ‘ಬೆಸ್ಟ್ ಡ್ರೆಸ್ಡ್-2023’ ಪಟ್ಟಿಯನ್ನು ಸಿದ್ಧಪಡಿಸಿದ್ದು, ಈ ಪಟ್ಟಿಯಲ್ಲಿ ಅಕ್ಷತಾ ಮೂರ್ತಿ ಸೇರಿದಂತೆ ಬ್ರಿಟನ್ನ ಖ್ಯಾತ ಸೆಲೆಬ್ರೆಟಿಗಳ ಒಟ್ಟು 25 ಜನರ ಹೆಸರುಗಳನ್ನು ಆಯ್ಕೆ ಮಾಡಲಾಗಿತ್ತು, “ಇದೀಗಾ ಟ್ಯಾಟ್ಲರ್ನ ಅತ್ಯುತ್ತಮ ಉಡುಪುಗಳ ಪಟ್ಟಿಯಲ್ಲಿ ಅಸ್ಕರ್ ನಂಬರ್ ಒನ್ ಸ್ಥಾನವು ಅಕ್ಷತಾ ಮೂರ್ತಿಗೆ ಸೇರಿದೆ” ಎಂದು ಟ್ಯಾಟ್ಲರ್ನ ಶೈಲಿ ಸಂಪಾದಕ ಚಾಂಡ್ಲರ್ ಟ್ರೆಗಾಸ್ಕೆಸ್ ಹೇಳಿದ್ದಾರೆ.
43 ವರ್ಷದ ಅಕ್ಷತಾ ಅವರು ಉದ್ಯಮಿಯಾಗಿ ಹೆಸರುವಾಸಿಯಾಗಿರುವ ಜೊತೆಗೆ , ಫ್ಯಾಶನ್ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಅಲ್ಲದೇ ಫ್ಯಾಷನ್ ಡಿಸೈನರ್ ಆಗಿ ಕೂಡ ಕೆಲಸ ಮಾಡಿದ್ದಾರೆ. ಫ್ಯಾಷನ್ ಲೋಕದ ಬಗ್ಗೆ ಅತಿಯಾದ ಆಸಕ್ತಿಯನ್ನು ಹೊಂದಿರುವ ಅಕ್ಷತಾ ಮೂರ್ತಿ 2007ರಲ್ಲಿ ಲಾಸ್ ಎಂಜಲಿಸ್ನ “ಫ್ಯಾಷನ್ ಇನ್ಸ್ಟಿಟೂಟ್ ಆಫ್ ಡಿಸೈನ್ ಆ್ಯಂಡ್ ಮರ್ಚಂಡೈಸಿಂಗ್” ತರಬೇತಿಯನ್ನು ಪಡೆದುಕೊಂಡಿದ್ದರು. 2010ರಲ್ಲಿ ತಮ್ಮದೇ ಆದ ಫ್ಯಾಷನ್ ಲೇಬಲ್ ಅಕ್ಷತಾ ಡಿಸೈನ್ಸ್ ಅನ್ನುಆರಂಭಿಸಿದ್ದರು.