ಚೀನಾ, ಜು 19 (DaijiworldNews/MS): ಚೀನಾದ ವಿದೇಶಾಂಗ ಸಚಿವ ಕ್ವಿನ್ ಗಾಂಗ್ ಕಳೆದ ಮೂರು ವಾರದಿಂದ ಎಲ್ಲಿಯೂ ಕಾಣಿಸಿಕೊಂಡಿಲ್ಲ, ಈ ಹಿನ್ನೆಲೆಯಲ್ಲಿ ಅವರು ನಾಪತ್ತೆಯಾಗಿದ್ದಾರಾ ಎನ್ನುವ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿವೆ.
57 ವರ್ಷ ವಯಸ್ಸಿನವರಾಗಿರುವ ಕ್ವಿನ್ ಗಾಂಗ್ 23 ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರ ಸ್ಥಾನವನ್ನು ದೇಶದ ಉನ್ನತ ರಾಜತಾಂತ್ರಿಕ ಹಾಗೂ ಮುಖ್ಯಸ್ಥರಾಗಿರುವ ವಾಂಗ್ ಯೀ ಅವರು ತೆಗೆದುಕೊಂಡಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಹುದ್ದೆಗೆ ನೇಮಕಗೊಂಡ ಕ್ವಿನ್ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ವಿಶ್ವಾಸಾರ್ಹ ಸಹಾಯಕರಾಗಿ ಕಂಡುಬಂದಿದ್ದರು.
ಕ್ವಿನ್ ನಾಪತ್ತೆಗೆ ಆರೋಗ್ಯ ಸ್ಥಿತಿಯೇ ಕಾರಣ ಎನ್ನುವ ಮಾತುಗಳು ಕೇಳಿಬಂದಿವೆ, ಆದರೆ ಯಾವುದೇ ಆಸ್ಪತ್ರೆಯ ಫೋಟೊಗಳು ಹೊರಬಿದ್ದಿಲ್ಲ. ಕಳೆದ ವಾರ ಜಕಾರ್ತದಲ್ಲಿ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ ಶೃಂಗಸಭೆಯಲ್ಲಿ ಕ್ವಿನ್ ಕಾಣಿಸಿಲ್ಲ. ಇನ್ನು ಜೂ.25ರಂದು ಒಮ್ಮೆ ಕ್ವಿನ್ ಸಾರ್ವಜನಿಕವಾಗಿ ಕಾಣಿಸಿದ್ದರು. ಅದಾದ ನಂತರ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ.
ಸಚಿವ ಕ್ವಿನ್ ಗಾಂಗ್ ಕಣ್ಮರೆಯಾಗಿರುವ ಕುರಿತು ಪ್ರಶ್ನಿಸಿದಾಗ, ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಅವರು ಒದಗಿಸಬೇಕಾದ ಯಾವುದೇ ಮಾಹಿತಿ ಇಲ್ಲ ಎಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಚೀನಾದಲ್ಲಿ ಉನ್ನತ ಮಟ್ಟದ ವ್ಯಕ್ತಿಗಳು ದೀರ್ಘಕಾಲದವರೆಗೆ ಕಣ್ಮರೆಯಾಗುವುದು ಸಾಮಾನ್ಯವಾಗಿದೆ.