ಇಸ್ಲಾಮಾಬಾದ್, ಜು 18 (DaijiworldNews/AK): ಭಾರತದ ಮಹತ್ವಾಕಾಂಕ್ಷೆ ಚಂದ್ರಯಾನ-3 ರ ಕುರಿತು ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಮಾಜಿ ಸಚಿವ ಫವಾದ್ ಚೌಧರಿ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಚಂದ್ರನ ವೀಕ್ಷಣೆಗಾಗಿ ಇಷ್ಟೊಂದು ಕಸರತ್ತು ಮಾಡುವ ಅಗತ್ಯವಿಲ್ಲ ಎಂದು ಹಾಸ್ಯ ಮಾಡಿದ್ದಾರೆ.
ಇದೀಗ ಫವಾದ್ ಚೌದರಿ ಅವರ ಸಂದರ್ಶನದ ವೀಡಿಯೋ ಎಲ್ಲೆಡೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಡೆಸಿದ ಚಂದ್ರನ ಕಾರ್ಯಾಚರಣೆಗೆ ಸಂಬಂಧಿಸಿದ ಪ್ರಶ್ನೆಗೆ ಹಾಸ್ಯಮಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಬಾಹ್ಯಾಕಾಶದಲ್ಲಿ ಚಂದ್ರನ ಸ್ಥಾನ ನಮಗೆ ಗೊತ್ತಿದೆ. ಯಾವಾಗ ಹುಟ್ಟುತ್ತಾನೆ, ಮುಳುಗುತ್ತಾನೆ ಎಂಬುದೂ ತಿಳಿದಿದೆ. ಆದರೆ ಚಂದ್ರನ ವೀಕ್ಷಣೆಗೆ ಇಷ್ಟು ಕಸರತ್ತು ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನು ಮಾಜಿ ಸಚಿವರ ಹೇಳಿಕೆಯನ್ನು ಬೆಂಬಲಿಸಿ ವೀಡಿಯೋವನ್ನು ಅನೇಕರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ
ಜು.14 ರಂದು ಚಂದ್ರಯಾನ-3 ಯೋಜನೆಯನ್ನು ಇಸ್ರೋ ಶ್ರೀಹರಿಕೋಟಾದ ಉಡ್ಡಯನ ಕೇಂದ್ರದಿಂದ ಉಡಾವಣೆ ಮಾಡಲಾಯಿತ್ತು. ಗಗನನೌಕೆಯು ಕಕ್ಷೆ ಬದಲಿಸುವ ಎರಡನೇ ಹಂತದ ಪ್ರಕ್ರಿಯೆಯು ಸೋಮವಾರ ಯಶಸ್ವಿಯಾಗಿದೆ. ಅಮೆರಿಕ, ಚೀನಾ, ರಷ್ಯಾ ದೇಶಗಳು ಚಂದ್ರನ ಮೇಲ್ಮೈ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿ ಯಶಸ್ವಿಯಾಗಿವೆ. ಭಾರತದ ಚಂದ್ರಯಾನ-3 ಯಶಸ್ವಿಯಾದರೆ ಆ ದೇಶಗಳ ಸಾಲಿಗೆ ಸೇರುತ್ತದೆ.