ಕೊಲಂಬಿಯಾ, ಜು 15 (DaijiworldNews/AK) ವಿಮಾನವೊಂದು ಪತನಗೊಂಡ ಬಳಿಕ 40 ದಿನ ಅಮೆಜಾನ್ ದಟ್ಟ ಅರಣ್ಯದಲ್ಲಿ ಸಿಲುಕಿದ್ದ ನಾಲ್ಕು ಮಕ್ಕಳು ಚಿಕಿತ್ಸೆ ಪಡೆದು ಒಂದು ತಿಂಗಳ ಬಳಿಕ ಗುರುವಾರ ಸೇನಾ ಅಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅವರೆಲ್ಲರೂ ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಮೇ 1ರಂದು ಕೊಲಂಬಿಯಾದ ಅಮೆಜಾನ್ ದಟ್ಟಾರಣ್ಯದಲ್ಲಿ ವಿಮಾನವೊಂದು ಪತನಗೊಂಡಿತ್ತು. ನಾಪತ್ತೆಯಾಗಿದ್ದ ಮಕ್ಕಳಿಗಾಗಿ ಕೊಲಂಬಿಯಾ ಸೇನೆ 'ಆಪರೇಷನ್ ಆನ್ ಹೋಪ್' ಹೆಸರಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು.ಕಾರ್ಯಾಚರಣೆಯಲ್ಲಿ ಲೆಸ್ಲಿ (13 ), ಸೊಲೀನಿ (9), ಟೈನ್ ನೊರಿಯಲ್ (4) ಮತ್ತು ಕ್ರಿಸ್ಟಿನ್ (11 ತಿಂಗಳು) ಮಗು ಜೂನ್ 9ರಂದು ಸೇನೆಗೆ ಸಿಕ್ಕಿದ್ದರು. ನಂತರ ಅವರನ್ನು ಬೊಗೋಟಾದಲ್ಲಿರುವ ಸೇನಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ದಾಖಲಿಸಿಲಾಯಿತ್ತು.
ಇದೀಗ ನಾಲ್ಕೂ ಮಕ್ಕಳು ಗುರುವಾರ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅವರು ಸಂಪೂರ್ಣ ಚೇತರಿಸಿಕೊಂಡಿದ್ದು, ಆರೋಗ್ಯವಾಗಿದ್ದಾರೆ ಎಂದು ಮಕ್ಕಳ ಚಿಕಿತ್ಸೆ ಹೊಣೆ ಹೊತ್ತಿದ್ದ ಕೊಲೊಂಬಿಯಾದ ಕುಟುಂಬ ಕಲ್ಯಾಣ ಸಂಸ್ಥೆಯ ನಿರ್ದೇಶಕಿ ಆಸ್ಟ್ರಿಡ್ ಕ್ಯಾಸೆರಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.ಮಕ್ಕಳು 40 ದಿನ ಕಾಡಿನಲ್ಲಿ ಅಲೆದಿದ್ದರೂ ಅವರ ಮೇಲೆ ದೈಹಿಕವಾಗಿ ಯಾವುದೇ ರೀತಿಯ ಪರಿಣಾಮವಾಗಿಲ್ಲ. 11 ತಿಂಗಳ ಮಗು ಕೂಡ ಸಂಪೂರ್ಣವಾಗಿ ಗುಣಮುಖವಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಮಕ್ಕಳ ಕೌಟುಂಬಿಕ ಹಿನ್ನೆಲೆಯನ್ನು ಆಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದರಿಂದ ಸುಮಾರು 6 ತಿಂಗಳ ಕಾಲ ಮಕ್ಕಳ ಲಾಲನೆ ಪಾಲನೆ ಕುಟುಂಬ ಕಲ್ಯಾಣ ಸಂಸ್ಥೆಯು ನೋಡಿಕೊಳ್ಳಲಿದೆ. ಮಕ್ಕಳು ಬೇರೆ ಮಕ್ಕಳೊಂದಿಗೆ ಆಶ್ರಯ ಶಿಬಿರದಲ್ಲಿ ಉಳಿಯಲಿದ್ದಾರೆ. ಆ ಮಾಹಿತಿಯನ್ನು ಬಹಿರಂಗಪಡಿಸಲಾಗದು. ಅವರಿಗೆ ಹಿತಾನುಭವ ಉಂಟಾಗಲಿ ಎಂಬ ಕಾರಣಕ್ಕೆ ಗ್ರಾಮೀಣ ಭಾಗದಲ್ಲಿ ಉಳಿಯಲಿದ್ದಾರೆ ಎಂದು ಕ್ಯಾಸೆರಸ್ ಹೇಳಿದ್ದಾರೆ.