ನ್ಯೂಯಾರ್ಕ್, ಜೂ 29 (DaijiworldNews/SM): ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ಮುನ್ನುಗ್ಗಿ ಬೆಳೆಯುತ್ತಿದೆ. ಅದ್ರಲ್ಲೂ ಕಳೆದ 2 ದಶಕದಲ್ಲಿ ಭಾರತದ ಅಭಿವೃದ್ಧಿಯ ದಿಕ್ಕು ಬದಲಾಗಿ ಹೋಗಿದೆ. ಇದೀಗ ಪಿಎಂ ಮೋದಿ ನೇತೃತ್ವದ ಸರ್ಕಾರ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಈ ಸಾಧನೆಯ ಬಗ್ಗೆ ಖುದ್ದು ವಿಶ್ವಸಂಸ್ಥೆ ಮುಖ್ಯಸ್ಥರೇ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿಶೀಲ ರಾಷ್ಟ್ರ ಅಂದರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿದ್ದ ಭಾರತ, ಇನ್ನೇನು ಕೆಲವೇ ವರ್ಷದಲ್ಲಿ ಅಭಿವೃದ್ಧಿ ಹೊಂದಿದ ಸ್ಥಾನ ಅಲಂಕರಿಸಿದರೂ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಭಾರತದ ಅಭಿವೃದ್ಧಿ ಬೆಳವಣಿಗೆ ಅಷ್ಟಿದೆ. ಅದರಲ್ಲೂ ಈ ಹಿಂದೆ ಭಾರತ ಯಾವೆಲ್ಲಾ ಕ್ಷೇತ್ರದಲ್ಲಿ ಹಿಂದೆ ಉಳಿದಿತ್ತೋ ಅದನ್ನೆಲ್ಲಾ ಸರಿದಾರಿಗೆ ತರಲಾಗುತ್ತಿದೆ. ಇದೀಗ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾಡಿದ ಸಾಧನೆಗೆ ಭಾರತ ಮತ್ತೊಂದು ಮೈಲಿಗಲ್ಲು ತಲುಪಿದೆ, ವಿಶ್ವಸಂಸ್ಥೆಯ ಮಕ್ಕಳ ಮೇಲಿನ ಸಂಘರ್ಷದ ಪಟ್ಟಿಯಿಂದ ಭಾರತವನ್ನು ತೆಗೆದು ಹಾಕಲಾಗಿದೆ.
ಅಂದಹಾಗೆ ವಿಶ್ವಸಂಸ್ಥೆ ಮಕ್ಕಳ ಮೇಲಿನ ಶಸ್ತ್ರಾಸ್ತ್ರ ಸಂಘರ್ಷಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಿಂದ ಭಾರತವನ್ನು ಕೈಬಿಡಲಾಗಿದೆ. ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಮಕ್ಕಳ ಮೇಲಿನ ಶಸ್ತ್ರಾಸ್ತ್ರ ಸಂಘರ್ಷಕ್ಕೆ ಸಂಬಂಧಿಸಿದ ವರದಿ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಭಾರತ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಇನ್ನು ಮಕ್ಕಳ ರಕ್ಷಣೆ ಬಗ್ಗೆ ಭಾರತ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ 2022ರ ವರದಿಯಲ್ಲಿ ಶ್ಲಾಘಿಸಿದ್ದರು ಗುಟೆರಸ್. ಅಲ್ಲದೆ ಸರ್ಕಾರದ ಕ್ರಮಗಳು ಆತಂಕದ ಸನ್ನಿವೇಶದಿಂದ ಭಾರತವನ್ನು ಮುಕ್ತವಾಗಿಸಲು ನೆರವಾಗಲಿವೆ ಎಂದು ಹೇಳಿದ್ದರು. ಇದೀಗ 2023ರ ವರದಿಯಲ್ಲಿ ಭಾರತ ಆ ಸಾಧನೆ ಮಾಡೇ ಬಿಟ್ಟಿದೆ.