ಪಾಕಿಸ್ತಾನ, ಜೂ 18 (DaijworldNews/HR): ಮೆಡಿಟರೇನಿಯನ್ ಸಮುದ್ರದಲ್ಲಿ ನೂರಾರು ನಾಗರಿಕರ ಸಾವಿಗೆ ಕಾರಣವಾದ ಗ್ರೀಸ್ ದೋಣಿ ದುರಂತದ ಹಿಂದೆ ಮಾನವ ಕಳ್ಳಸಾಗಣೆದಾರರನ್ನು ಪತ್ತೆಹಚ್ಚಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಉನ್ನತ ಮಟ್ಟದ ತನಿಖೆಯನ್ನು ಆದೇಶಿಸಿದ್ದು, ಮಾನವ ಕಳ್ಳಸಾಗಣೆಗೆ ಕಾರಣವಾದ 10 ಉಪ-ಏಜೆಂಟರನ್ನು ಪಾಕಿಸ್ತಾನದ ಹಲವಾರು ಸ್ಥಳಗಳಿಂದ ಬಂಧಿಸಲಾಗಿದೆ.
ಜೂನ್ 14ರಂದು ಗ್ರೀಸ್ನ ಕರಾವಳಿ ಪ್ರದೇಶದಲ್ಲಿ ನಡೆದ ಬೋಟ್ ದುರಂತದಲ್ಲಿ 400 ಮಂದಿ ಪಾಕಿಸ್ತಾನದ ಪ್ರಜೆಗಳು ಸಾವಿಗೀಡಾಗಿದ್ದು, ಕೇವಲ 12 ಮಂದಿ ಮಾತ್ರವೇ ಘಟನೆಯಲ್ಲಿ ಬದುಕುಳಿದಿದ್ದಾರೆ ಎಂದು ಪಾಕಿಸ್ತಾನ ಸಚಿವಾಲಯ ಹೇಳಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಕಳ್ಳಸಾಗಣೆ ಮಾಡುತ್ತಿದ್ದ 10 ಮಂದಿಯನ್ನ ಬಂಧಿಸಲಾಗಿದೆ.
ಜೂನ್ 14ರಂದು ರಾತ್ರಿ ಗ್ರೀಸ್ ಕರಾವಳಿಯಿಂದ ಯುರೋಪ್ನತ್ತ ಹೊರಟಿದ್ದ ಹಡಗಿನಲ್ಲಿ ಹೆಚ್ಚು ಜನರು ತುಂಬಿದ್ದರಿಂದ ಬೋಟ್ ಮುಳುಗಿ 79 ಮಂದಿ ಸಾವನ್ನಪ್ಪಿದ್ದರು. ನೂರಾರು ಮಂದಿಯನ್ನು ರಕ್ಷಣೆ ಮಾಡಲಾಗಿತ್ತು. ಸುಮಾರು 400 ರಿಂದ 750 ಮಂದಿ ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು. ಹಡಗಿನಲ್ಲಿದ್ದ ಹೆಚ್ಚಿನ ಸಂಖ್ಯೆಯ ವಲಸಿಗರು ಈಜಿಪ್ಟ್, ಸಿರಿಯಾ ಮತ್ತು ಪಾಕಿಸ್ತಾನದಿಂದ ಬಂದವರು ಎಂದು ಹೇಳಲಾಗಿತ್ತು.
ಇನ್ನು ನಾಳೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು ಮತ್ತು ಮೃತರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುವುದು ಎಂದು ಪ್ರಧಾನಿ ಕಚೇರಿ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.