ನೈಜೀರಿಯಾ, ಜೂ 07 (DaijiworldNews/HR): ನಿತಿನ್ ಸಂದೇಸರ ಮತ್ತು ಚೇತನ್ ಸಂದೇಸರ ಎಂಬ ಸಹೋದರರು ನೈಜೀರಿಯಾದ ಅತಿದೊಡ್ಡ ಸ್ವತಂತ್ರ ತೈಲ ಉತ್ಪಾದಕ ಸಂಸ್ಥೆಯ ಒಡೆಯರು.ಇವರು ಭಾರತ ಬಿಟ್ಟು ಪರಾರಿಯಾಗಿದ್ದು ನೈಜೀರಿಯಾದಲ್ಲಿ ಇವರ ಅದ್ಧೂರಿ ಪಾರ್ಟಿಗಳನ್ನು ಮಾಡುತ್ತಿದ್ದಾರೆ.
ಕೊಸೋವೋ ಪ್ರಧಾನಿ ಜೊತೆ ಚೇತನ್ ಸಂದೇಸರ (ಎಡಗಡೆ)
ನೈಜೀರಿಯಾದ ಆರ್ಥಿಕ ದುಸ್ಥಿತಿಯಲ್ಲಿ ಆ ದೇಶಕ್ಕೆ ಸಂದೇಸರ ಸಹೋದರರು ಪುಷ್ಟಿ ಕೊಡುವ ಆಪದ್ಬಾಂಧವರಂತೆ ಕಾಣುತ್ತಾರೆ. ಭಾರತದಲ್ಲಿ ಇವರ ವಿರುದ್ಧ 14,000 ಕೋಟಿ ರೂ ವಂಚನೆಯ ಹಗರಣ ಇದೆಯಾದರೂ ನೈಜೀರಿಯಾಗೆ ಇವರು ಹೀರೋಗಳಾಗಿ ಹೋಗಿದ್ದಾರೆ.
ಇನ್ನು ನೈಜೀರಿಯಾದ ಮರುಭೂಮಿಯಲ್ಲಿ 1 ಬಿಲಿಯನ್ ಬ್ಯಾರಲ್ಗಳಿಷ್ಟಿರುವ ತೈಲನಿಕ್ಷೇಪ ಸಿಕ್ಕಿರುವುದು ಸಂದೇಸರ ಸಹೋದರರಿಗೆ ಸುಗ್ಗಿ ತಂದಿದ್ದು, ಶೆಲ್ ಮತ್ತು ಎಕ್ಸಾನ್ ಮೋಬಿಲ್ ಸಂಸ್ಥೆಗಳು ನೈಜೀರಿಯಾ ಬಿಟ್ಟು ಹೋಗುತ್ತಿರುವ ಹಿನ್ನೆಲೆಯಲ್ಲಿ ಸಂದೇಸರರ ಪ್ರಾಮುಖ್ಯತೆ ನೈಜೀರಿಯಾಗೆ ಇನ್ನಿಲ್ಲದಷ್ಟು ಹೆಚ್ಚಾಗಿದೆ.
ಗುಜರಾತ್ ಮೂಲದ ಚೇತನ್ ಮತ್ತು ನಿತಿನ್ ಸಂದೇಸರರು ಎಂಬತ್ತರ ದಶಕದಲ್ಲಿ ಚಹಾ ವ್ಯವಹಾರ ಮಾಡಿಕೊಂಡಿದ್ದರು. ನಂತರ ತೈಲ ಮತ್ತು ಅನಿಲ, ಆರೋಗ್ಯ, ನಿರ್ಮಾಣ ಕ್ಷೇತ್ರಗಳಲ್ಲಿ ಉದ್ಯಮ ಬೆಳೆಸಿದರು. ಸಂದೇಶರ ಸಹೋದರರು ಭಾರತದಲ್ಲಿ ತಮ್ಮ ಉದ್ಯಮ ವಿಸ್ತರಣೆಗೆ ಮನಬಂದತೆ ಸಾಲ ಮಾಡಿದ್ದು, ಎಸ್ಬಿಐ, ಬ್ಯಾಂಕ್ ಆಫ್ ಬರೋಡ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳಿಂದ ಇವರು 14,000 ಕೋಟಿ ರೂ ಸಾಲ ಪಡೆದು ವಂಚಿಸಿ ಪರಾರಿಯಾಗಿದ್ದಾರೆ.