ಕೈವ್ ಜೂ 06 (DaijiworldNews/MS): ದಕ್ಷಿಣ ಉಕ್ರೇನ್ನಲ್ಲಿ ಪರಮಾಣು ವಿದ್ಯುತ್ ಸ್ಥಾವರದ ಸಮೀಪವಿರುವ ಸೋವಿಯತ್ ಕಾಲದ ಬೃಹತ್ ಹಾಗೂ ಪ್ರಮುಖ ಅಣೆಕಟ್ಟು ಇದ್ದಕ್ಕಿದ್ದಂತೆ ಕುಸಿದಿದೆ. ಡ್ಯಾಂ ಅನ್ನು ರಷ್ಯಾ ಸೇನೆ ಧ್ವಂಸ ಮಾಡಿದೆ ಎಂದು ಉಕ್ರೇನ್ ಆರೋಪಿಸಿದೆ.
ದಕ್ಷಿಣ ಉಕ್ರೇನ್ನ ಕಖೋವ್ಕಾ ಜಲವಿದ್ಯುತ್ ಸ್ಥಾವರದಲ್ಲಿನ ಅಣೆಕಟ್ಟು ಧ್ವಂಸಗೊಳಿಸಿರುವ ಆರೋಪವನ್ನು ನಿರಾಕರಿಸಿರುವ ರಷ್ಯಾ, ಉಕ್ರೇನ್ ಸೈನಿಕರೇ ಡ್ಯಾಂ ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿದೆ. ಅಣೆಕಟ್ಟು ಸ್ಫೋಟಗೊಂಡಿರುವುದರಿಂದ ಯುದ್ಧ ವಲಯದಲ್ಲಿ ಪ್ರವಾಹದ ನೀರು ಹರಿದಿದೆ.
ಇನ್ನು ಉಕ್ರೇನ್ನ ಅಧ್ಯಕ್ಷೀಯ ಆಡಳಿತದ ಮುಖ್ಯಸ್ಥರು ಮಂಗಳವಾರ ಈ ಡ್ಯಾಂ ಸ್ಫೋಟವನ್ನು ರಷ್ಯಾದ ಪಡೆಗಳು ಮಾಡಿದ "ಪರಿಸರ ಹತ್ಯೆ" ಎಂದು ಬಣ್ಣಿಸಿದ್ದಾರೆ. ಇತ್ತ ರಷ್ಯಾ ಕೂಡ ಘಟನೆಗೆ ಉಕ್ರೇನ್ ಹೊಣೆ ಎಂದು ಆರೋಪಿಸಿದೆ. ಡ್ಯಾಂ ಸ್ಫೋಟದಿಂದ ಮುಂದಿನ ಐದು ಗಂಟೆಗಳಲ್ಲಿ ನೀರು ನಿರ್ಣಾಯಕ ಮಟ್ಟವನ್ನು ತಲುಪಬಹುದು ಎಂದು ಉಕ್ರೇನ್ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ