ನ್ಯೂಯಾರ್ಕ್, ಜೂ 05 (DaijiowrldNews/HR): ಪ್ರಧಾನಿ ನರೇಂದ್ರ ಮೋದಿ ಅವರು ಭಾರತವೆಂಬ ಕಾರನ್ನು ಹಿಂಬದಿ ಕನ್ನಡಿ ನೋಡಿಕೊಂಡು ಓಡಿಸುತ್ತಿದ್ದಾರೆ. ಅದು ಅಪಘಾತಕ್ಕೀಡಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಅಮೇರಿಕಾದ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅಲ್ಲಿನ ಜಾವಿಟ್ಸ್ ಸೆಂಟರ್ನಲ್ಲಿ ಭಾರತೀಯ-ಅಮೆರಿಕನರನ್ನು ಉದ್ದೇಶಿಸಿ ಮಾತನಾಡಿದ್ದು, ಈ ವೇಳೆ ಒಡಿಶಾ ರೈಲು ದುರಂತದಲ್ಲಿ ಸಾವಿಗೀಡಾದವರಿಗೆ ಒಂದು ನಿಮಿಷಗಳ ಕಾಲ ಮೌನಾಚರಣೆ ನಡೆಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು.
ಇನ್ನು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರೈಲು ಅಪಘಾತವೊಂದು ನಡೆದಿದ್ದು, ಆಗಿನ ರೈಲ್ವೇ ಸಚಿವರು 'ಈಗ ನಡೆದ ಅಪಘಾತಕ್ಕೆ ಬ್ರಿಟಿಷರು ಕಾರಣ' ಎಂದು ಹೇಳಿರಲಿಲ್ಲ. 'ಇದರ ಸಂಪೂರ್ಣ ಹೊಣೆ ನನ್ನದು ಎಂದು ಒಪ್ಪಿಕೊಂಡು ರಾಜೀನಾಮೆ ನೀಡುತ್ತೇನೆ' ಎಂದಿದ್ದರು. ಆದರೆ ಇತ್ತೀಚೆಗೆ ಭಾರತದಲ್ಲಿ ತಪ್ಪುಗಳು ನಡೆದರೂ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಿಲ್ಲ' ಎಂದು ಪರೋಕ್ಷವಾಗಿ ಬಿಜೆಪಿ ಕುರಿತು ಟೀಕಿಸಿದ್ದಾರೆ.