ಆಸ್ಟ್ರೇಲಿಯಾ, ಜೂ 03 (DaijiworldNews/MS): ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತ ಘಟನೆಗೆ ವಿವಿಧ ರಾಷ್ಟ್ರಗಳ ನಾಯಕರು ತೀವ್ರ ಸಂತಾಪ ಸೂಚಿಸಿದ್ದಾರೆ.
ಭೀಕರ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 288ಕ್ಕೆ ಏರಿಕೆಯಾಗಿದ್ದು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ.
ದುರಂತದ ಬಗ್ಗೆ ಟ್ವೀಟ್ ಮಾಡಿ ಕಳವಳ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳ ಸಚಿವ ಪೆನ್ನಿ ವಾಂಗ್ ಅವರು, ವಿನಾಶಕಾರಿ ರೈಲು ಅಪಘಾತ ಹಲವು ಪ್ರಾಣಗಳನ್ನು ಬಲಿ ಪಡೆದಿದೆ. ಇದು ದುಃಖಕರ ಸಂಗತಿ. ಘಟನೆಯ ಬಗ್ಗೆ ಸಂತಾಪವಿದೆ ಎಂದು ಹೇಳಿದ್ದಾರೆ.
ತೈವಾನ್ ಅಧ್ಯಕ್ಷ ತ್ಸೈ ಇಂಗ್-ವೆನ್ ಅವರೂ ಕೂಡ ಘಟನೆಗೆ ಸಂತಾಪ ಸೂಚಿಸಿದ್ದಾರೆ.ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಕೂಡ ರೈಲು ದುರಂತಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ ಅವರು, ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದ ಬಗ್ಗೆ ತಿಳಿದು ತೀವ್ರ ದುಃಖವಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಎಲ್ಲರೂ ಶೀಘ್ರ ಗುಣಮುಖರಾಗಲಿ. ಈ ದುಃಖದ ಸಮಯದಲ್ಲಿ ಶ್ರೀಲಂಕಾ ಭಾರತದೊಂದಿಗೆ ನಿಂತಿರುತ್ತದೆ ಎಂದು ಹೇಳಿದ್ದಾರೆ. ಪಾಕ್ ಪ್ರಧಾನಿಯೂ ಘಟನೆ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ.