ನೌಮಿಯಾ,ಮೇ19(DaijiworldNews/KH):ಫ್ರೆಂಚ್ ಭೂಪ್ರದೇಶ ನ್ಯೂ ಕ್ಯಾಲೆಡೋನಿಯಾದ ಲಾಯಲ್ಟಿ ಐಲ್ಯಾಂಡ್ಸ್ನ ಆಗ್ನೇಯ ಭಾಗದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಈ ಹಿನ್ನಲೆಯಲ್ಲಿ ದಕ್ಷಿಣ ಪೆಸಿಫಿಕ್ ರಾಷ್ಟ್ರಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ವನುವಾಟು, ಫಿಜಿ ಮತ್ತು ನ್ಯೂ ಕ್ಯಾಲೆಡೋನಿಯಾಗಳಿಗೆ ಸಂಭಾವ್ಯ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ (ಪಿಟಿಡಬ್ಲ್ಯೂಸಿ) ತಿಳಿಸಿದೆ.
ಭೂಕಂಪನದ ಕೇಂದ್ರಬಿಂದು ಲಾಯಲ್ಟಿ ಐಲ್ಯಾಂಡ್ಸ್ನ ಆಗ್ನೇಯ ಭಾಗದಲ್ಲಿ 38 ಕಿಮೀ (24 ಮೈಲಿ) ಆಳದಲ್ಲಿ ಕಂಡುಬಂದಿದೆ. ಇದು ದಕ್ಷಿಣ ಪೆಸಿಫಿಕ್ ರಾಷ್ಟ್ರಗಳಿಗೆ ಸುನಾಮಿ ಆತಂಕ ತಂದೊಡ್ಡುವ ಸಾಧ್ಯತೆ ಇದ್ದು ಈ ಹಿನ್ನಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಪ್ರಾಥಮಿಕ ಭೂಕಂಪನ ಮಾಪನದ ಅಧ್ಯಯನ ಆಧಾರದಲ್ಲಿಸಂಜೆ 5 ಗಂಟೆ ಸುಮಾರಿಗೆ ನ್ಯೂಜಿಲ್ಯಾಂಡ್ನ ನಾರ್ತ್ ಕೇಪ್ ಸುತ್ತಲಿನ ಪ್ರದೇಶಗಳಿಗೆ ಅಲೆಗಳು ತಲುಪುವ ಸಾಧ್ಯತೆ ಇದೆ. ಮೊದಲ ಸುನಾಮಿ ಚಟುವಟಿಕೆ ಅಷ್ಟೊಂದು ಪ್ರಬಲವಾಗಿರುವುದಿಲ್ಲ ಅಪಾಯವಿರುವ ಕರಾವಳಿ ಪ್ರದೇಶಗಳಲ್ಲಿನ ಜನರು ಜಾಗರೂಕತೆಯಿಂದ ಇರಬೇಕು ನ್ಯೂಜಿಲ್ಯಾಂಡ್ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ಹೇಳಿಕೆ ನೀಡಿದೆ.