ವಾಷಿಂಗ್ಟನ್, ಮೇ 18 (DaijiworldNews/MS): 2008 ರಲ್ಲಿ ಮುಂಬೈನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಬೇಕಾಗಿದ್ದ, ಪಾಕ್ ಮೂಲದ ಕೆನಡಾ ಉದ್ಯಮಿ ತಹಾವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ಸ್ಥಳೀಯ ನ್ಯಾಯಾಲಯ ಅನುಮೋದನೆ ನೀಡಿದೆ.
ಮುಂಬೈ ದಾಳಿಗೆ ಸಂಬಂಧಿಸಿದಂತೆ ಈತನನ್ನು ಒಪ್ಪಿಸಬೇಕು ಎಂಬ ಭಾರತದ ಕೋರಿಕೆಯ ಮೇರೆಗೆ ಕಳೆದ ಜೂ. 10 ರಾಣಾನನ್ನು ಅಮೆರಿಕದಲ್ಲಿ ಬಂಧಿಸಲಾಗಿತ್ತು. ಆತನ ಹಸ್ತಾಂತರಕ್ಕಾಗಿ ಅಮೆರಿಕ ಸರ್ಕಾರಕ್ಕೆ ಭಾರತ ಮನವಿ ಮಾಡಿದ್ದು, ಇದೀಗ ನ್ಯಾಯಾಲಯ ಇದಕ್ಕೆ ಸಮ್ಮತಿ ನೀಡಿದೆ.
2008 ರಲ್ಲಿ ಮುಂಬೈ ದಾಳಿಯಲ್ಲಿ 10 ಪಾಕಿಸ್ತಾನಿ ಭಯೋತ್ಪಾದಕರು 60 ಗಂಟೆಗಳಿಗೂ ಹೆಚ್ಚು ಕಾಲ ಮುತ್ತಿಗೆ ಹಾಕಿದ್ದರು, ಈ ಘಟನೆಯಲ್ಲಿ 6 ಅಮೆರಿಕನ್ನರು ಸೇರಿದಂತೆ 160 ಕ್ಕೂ ಹೆಚ್ಚು ಜನರ ಮೃತಪಟ್ಟಿದ್ದರು.
ತಹವ್ವುರ್ ರಾಣಾ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ. ತನ್ನ ಬಾಲ್ಯದ ಗೆಳೆಯ ಡೇವಿಡ್ ಕೋಲ್ಮನ್ ಹೆಡ್ಲಿ, ದಾವೂದ್ ಗಿಲಾನಿ ಮತ್ತು ಇತರರಿಗೆ ಸಹಕರಿಸಿದ್ದಾನೆ. ಈ ಮೂಲಕ ಮುಂಬೈನಲ್ಲಿ ಲಷ್ಕರ್ ಭಯೋತ್ಪಾದಕ ದಾಳಿಯ ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿ ಭಾಗವಹಿಸಿದ್ದಾನೆ ಎಂದು ಭಾರತ ಆರೋಪಿಸಿದೆ.