ಲಂಡನ್, ಮಾ 22(MSP): ದೇಶಭ್ರಷ್ಟ ವಜ್ರದ ವ್ಯಾಪಾರಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆಯ ರೂವಾರಿ, ವಿತ್ತಾಪರಾಧಿ ನೀರವ್ ಮೋದಿ ನೈಋತ್ಯ ಲಂಡನ್ನ ವಾಂಡ್ಸ್ವರ್ತ್ ಜೈಲಿನಲ್ಲಿ ಕೈದಿಯಾಗಿ ಕಾಲ ಕಳೆಯುತ್ತಿದ್ದಾನೆ. ಈತನ ಜಾಮೀನು ಅರ್ಜಿಯನ್ನು ಲಂಡನ್ ನ್ಯಾಯಾಲಯ ತಿರಸ್ಕರಿಸಿದೆ. ಆದರೆ ಬುಧವಾರ ನೀರವ್ ಲಂಡನ್ ನಲ್ಲಿ ಬಂಧನಕ್ಕೊಳಗಾಗುವ ಮುನ್ನ ಕಾನೂನಿನಿಂದ ತಪ್ಪಿಸಿಕೊಳ್ಳಲು ಹಲವು ಯತ್ನಗಳನ್ನು ನಡೆಸಿದ್ದ ಎಂದು ಬೆಳಕಿಗೆ ಬಂದಿದೆ.
ಇದರಲ್ಲಿ ಪ್ರಮುಖವಾಗಿ, ತನ್ನ ಗುರುತು ಮರೆಮಾಚುವ ಸಲುವಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಸಿದ್ದ ಎನ್ನಲಾಗಿದೆ, ಆದರೆ ಈ ಪ್ರಯತ್ನದಲ್ಲಿ ಸಕಾರಗೊಳ್ಳುವ ಮುಂಚೆಯೇ ಆತ ಪೊಲೀಸರ ಬಲೆಗೆ ಬಿದ್ದಿದ್ದ. ಇಷ್ಟು ಮಾತ್ರವಲ್ಲದೆ ಆಸ್ಟ್ರೇಲಿಯಾದ ಪೂರ್ವ ಭಾಗಕ್ಕೆ 1750 ಕಿ.ಮೀ ದೂರವಿರುವ ಸಣ್ಣ ದ್ವೀಪರಾಷ್ಟ್ರ ವನಾಟುದ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಿದ್ದ, ಮಾತ್ರವಲ್ಲದೆ ಸಿಂಗಾಪುರದಲ್ಲಿ ಶಾಶ್ವತ ನಿವಾಸಕ್ಕೆ ಮನವಿ ಮಾಡಿದ್ದ. ಇದಕ್ಕಾಗಿ ಸಹಾಯ ಕೋರಿ ಬ್ರಿಟನ್ ನ ಪ್ರಖ್ಯಾತ ಕಾನೂನು ಸಂಸ್ಥೆಯನ್ನು ಭೇಟಿ ಮಾಡಿದ್ದ.
ಪ್ರಸ್ತುತ ಈತ ಕೈದಿಯಾಗಿರುವ ಲಂಡನ್ ವಾಂಡ್ಸ್ವರ್ತ್ ಜೈಲಿನಲ್ಲಿ ಸುಮಾರು 1,430 ಪುರುಷ ಕೈದಿಗಳಿದ್ದು, ಅವರ ಜತೆಗೆ ಕೋಣೆ ಹಂಚಿಕೊಳ್ಳಬೇಕಿದೆ. ತನಗೆ ಪ್ರತ್ಯೇಕ ಸೆಲ್ ನೀಡುವಂತೆ ನೀರವ್ ಮೋದಿ ಕೋರಿದ್ದು, ಅದನ್ನು ಕೋರ್ಟ್ ಪುರಸ್ಕರಿಸಿಲ್ಲ ಎಂದು ತಿಳಿದುಬಂದಿದೆ. ನೀರವ್ ಮೋದಿ ಪ್ರಕರಣದ ವಿಚಾರಣೆ ಮಾ.29ಕ್ಕೆ ಇರಲಿದೆ.