ಕಠ್ಮಂಡು, ಮಾ 26 (DaijiworldNews/DB): ಏರ್ ಇಂಡಿಯಾ ಮತ್ತು ನೇಪಾಳದ ಏರ್ ಲೈನ್ಸ್ ವಿಮಾನಗಳು ಮಾರ್ಗ ಮಧ್ಯೆ ಪರಸ್ಪರ ಘರ್ಷಣೆಗೆ ಒಳಗಾಗಲಿದ್ದ ಅವಘಡ ಸ್ವಲ್ಪದರಲ್ಲೇ ತಪ್ಪಿದೆ.
ಎರಡೂ ವಿಮಾನಗಳು ಪರಸ್ಪರ ಹತ್ತಿರಕ್ಕ ಬಂದಿದ್ದು, ವಾರ್ನಿಂಗ್ ವ್ಯವಸ್ಥೆಗಳು ಕೂಡಲೇ ಎರಡೂ ವಿಮಾನಗಳ ಪೈಲಟ್ಗಳಿಗೆ ಎಚ್ಚರಿಕೆ ನೀಡಿವೆ. ಇದರಿಂದಾಗಿ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ ಎಂದು ಕಠ್ಮಂಡು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಇನ್ನು ಘಟನೆ ಸಂಬಂಧ ಅಜಾಗರೂಕತೆ ಆರೋಪದಡಿ ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ಏರ್ ಸ್ಟ್ರಾಫಿಕ್ ಕಂಟ್ರೋಲರ್ ವಿಭಾಗದ ಇಬ್ಬರು ಉದ್ಯೋಗಿಗಳನ್ನು ವಜಾ ಮಾಡಲಾಗಿದೆ ಎಂದು ಸಿಎಎಎನ್ ವಕ್ತಾರ ಜಗನ್ನಾಥ್ ನಿರೋಲಾ ಹೇಳಿದ್ದಾರೆ.
ಮಲೇಷ್ಯಾದ ಕೌಲಾಲಂಪುರದಿಂದ ಶುಕ್ರವಾರ ಬೆಳಗ್ಗೆ ಕಠ್ಮಂಡುವಿಗೆ ಆಗಮಿಸುತ್ತಿದ್ದ ನೇಪಾಳ ಏರ್ಲೈನ್ಸ್ ಮತ್ತು ನವದೆಹಲಿಯಿಂದ ಕಠ್ಮಂಡುವಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನಗಳು ಘರ್ಷಣೆಗೆ ಒಳಗಾಗುವ ಸಾಧ್ಯತೆಗಳಿತ್ತು. ಏರ್ ಇಂಡಿಯಾ ವಿಮಾನ 19,000 ಅಡಿಗಳಿಂದ ಕೆಳಗಿಳಿಯುತ್ತಿದ್ದರೆ, ಅದೇ ಸ್ಥಳದಲ್ಲಿ ನೇಪಾಳದ ಏರ್ಲೈನ್ಸ್ ವಿಮಾನ 15,000 ಅಡಿ ಎತ್ತರದಲ್ಲಿ ಮೇಲೇರುತ್ತಿತ್ತು. ಎರಡೂ ವಿಮಾನಗಳೂ ಪರಸ್ಪರ ಹತ್ತಿರದಲ್ಲಿವೆ ಎಂಬುದು ರಾಡಾರ್ನಲ್ಲಿ ಕಂಡು ಬಂದಿದೆ. ಇದು ಗೊತ್ತಾದ ಕೂಡಲೇ ವಾರ್ನಿಂಗ್ ವ್ಯವಸ್ಥೆಗಳು ವಿಮಾನ ಪೈಲಟ್ಗಳನ್ನು ಎಚ್ಚರಿಸಿದ್ದರಿಂದ ನೇಪಾಳ ಏರ್ಲೈನ್ಸ್ ವಿಮಾನ 7,000 ಅಡಿಗಳಿಗೆ ಇಳಿಯುವ ಮೂಲಕ ದೊಡ್ಡ ಘರ್ಷಣೆಯೊಂದನ್ನು ತಪ್ಪಿಸಿತು ಎಂದು ನಿರೋಲ ಹೇಳಿರುವುದಾಗಿ ವರದಿಯಾಗಿದೆ.
ಘಟನೆ ಸಂಬಂಧ ತನಿಖೆ ನಡೆಸಲು ನಾಗರಿಕ ವಿಮಾನಯಾನ ಪ್ರಾಧಿಕಾರ ಮೂವರು ಸದಸ್ಯರ ತನಿಖಾ ಸಮಿತಿ ರಚನೆ ಮಾಡಿದೆ.