ಪಾಕಿಸ್ತಾನ, ಮಾ 22 (DaijiworldNews/DB): ಪಾಕಿಸ್ತಾನದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಕನಿಷ್ಠ 9 ಮಂದಿ ಬಲಿಯಾಗಿದ್ದಾರೆ. 160ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪಾಕಿಸ್ತಾನದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದರ ಕೇಂದ್ರಬಿಂದು ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶ ಆಗಿದೆ. ಅಫ್ಘಾನಿಸ್ತಾನದಲ್ಲಿ ಇಬ್ಬರು ಸಾವನ್ನಪ್ಪಿದರೆ, ಪಾಕಿಸ್ತಾನದಲ್ಲಿ ಒಂಬತ್ತು ಮಂದಿ ಜೀವ ಕಳೆದುಕೊಂಡಿದ್ದಾರೆ. ಹಲವು ಕಟ್ಟಡಗಳು ಕುಸಿದು ಬಿದ್ದಿವೆ ಎಂದು ವರದಿಯಾಗಿದೆ.
180 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ. ಇಸ್ಲಾಮಾಬಾದ್, ಪೇಶಾವರ, ಚಾರ್ಸದ್ದಾ, ಲಾಹೋರ್ ಮತ್ತು ರಾವಲ್ಪಿಂಡಿ ಸೇರಿದಂತೆ ವಿವಿಧ ನಗರಗಳಲ್ಲಿ ಕಂಪನದ ಅನುಭವವಾಗಿದೆ ಎಂದು ಪಾಕಿಸ್ತಾನ ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಪಾಕಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಭಾರತದಲ್ಲಿಯೂ ಕಂಪನದ ಅನುಭವವಾಗಿದೆ. ದೆಹಲಿ, ಹಿಮಾಚಲ ಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಕಂಪನದ ಅನುಭವವಾಗಿದೆ. ಇತರ ಒಂಬತ್ತು ದೇಶಗಳಲ್ಲಿಯೂ ಕಂಪನ ಅನುಭವಕ್ಕೆ ಬಂದಿದೆ ಎನ್ನಲಾಗಿದೆ.