ನ್ಯೂಯಾರ್ಕ್, ಮಾ 19 (DaijiworldNews/DB): ದಕ್ಷಿಣ ಅಮೆರಿಕಾದ ಈಕ್ವೆಡಾರ್ ಮತ್ತು ಉತ್ತರ ಪೆರುವಿನಲ್ಲಿ ಭೂಕಂಭ ಸಂಭವಿಸಿದ್ದು, ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ.
ಶನಿವಾರ ಮಧ್ಯಾಹ್ನ ವೇಳೆಗೆ 6.8 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನದಿಂದಾಗಿ 13 ಮಂದಿ ಪ್ರಾಣ ಕಳೆದುಕೊಂಡರೆ ಹಲವರು ಗಾಯಗೊಂಡಿದ್ದಾರೆ. ಈಕ್ವೆಡಾರ್ನ ಮಚಲಾ, ಕ್ಯುಂಕಾ ಸೇರಿದಂತೆ ವಿವಿಧ ನಗರಗಳಲ್ಲಿ ವ್ಯಾಪಕ ಹಾನಿಯಾಗಿದೆ. ಮನೆಗಳು, ಶಾಲೆ, ವೈದ್ಯಕೀಯ ಕೇಂದ್ರ ಸೇರಿದಂತೆ ಹಲವು ಕಟ್ಟಡಗಳು ಕುಸಿದು ಬಿದ್ದಿವೆ. ಇನ್ನು ಹಲವು ವಾಹನಗಳು ಜಖಂಗೊಂಡಿವೆ ಎಂದು ವರದಿಯಾಗಿದೆ.
ಗುವಾಯಾಸ್ ಪ್ರಾಂತ್ಯದ ಬಾಲಾವೊ ನಗರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿ 66.4 ಕಿಮೀ ಆಳದಲ್ಲಿ ಭೂಮಿ ಕಂಪಿಸಿರುವುದಾಗಿ ಯುಎಸ್ ಜಿಯಾಲಾಜಿಕಲ್ ಇಲಾಖೆ ಹೇಳಿದೆ.
ಇನ್ನು ಭೂಕಂಪನ ಪೀಡಿತರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಮನೆ ಕಳೆದುಕೊಂಡವರಿಗೆ, ಸಂತ್ರಸ್ತ ಎಲ್ಲಾ ಜನರಿಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ರಕ್ಷಣೆಗೆ ಬೇಕಾದ ಸೌಲಭ್ಯವನ್ನೂ ನೀಡಲಾಗುತ್ತಿದೆ ಎಂದು ಈಕ್ವೆಡಾರ್ ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ಹೇಳಿದ್ದಾರೆ.
ಇನ್ನು ಈಕ್ಚೆಡಾರ್ನಲ್ಲಿ ಹಾನಿ ಹೆಚ್ಚಿದ್ದರೆ, ಉತ್ತರ ಪೆರುವಿನಲ್ಲಿ ಹೆಚ್ಚಿನ ಹಾನಿ, ಅಪಾಯ ಉಂಟಾಗಿಲ್ಲ ಎನ್ನಲಾಗಿದೆ.