ನ್ಯೂಯಾರ್ಕ್, ಮಾ 18 (DaijiworldNews/DB): ಸಾಂಸ್ಕೃತಿಕ ಭಾಗೀದಾರಿಕೆ ನೆಪದಲ್ಲಿ ಸಿಸ್ಟರ್ ಸಿಟಿ ಎಂದು ಹೇಳಿಕೊಂಡು ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಅಮೆರಿಕಾದ ಸುಮಾರು 30ಕ್ಕೂ ಹೆಚ್ಚು ನಗರಗಳಿಗೆ ವಂಚನೆ ಎಸಗಿದ್ದಾನೆ.
ಅಮೆರಿಕಾದ ನೆವಾರ್ಕ್, ನ್ಯೂಜೆರ್ಸಿ, ರಿಚ್ಮಂಡ್, ವರ್ಜಿನಿಯಾ, ಡೇಟನ್, ಒಹಾಯೊ, ಬ್ಯೂನಾ ಪಾರ್ಕ್, ಫ್ಲೋರಿಡಾ ಮುಂತಾದ 30ಕ್ಕೂ ಅಧಿಕ ನಗರಗಳೊಂದಿಗೆ ತನ್ನ ಯುನೈಟೆಡ್ ಸ್ಟೇಟ್ಸ್ ಅಫ್ ಕೈಲಾಸ ಎಂಬ ಸ್ವಘೋಷಿತ ದೇಶದ ಹೆಸರಿನಲ್ಲಿ ಸಾಂಸ್ಕೃತಿಕ ಭಾಗೀದಾರಿಕೆ ಎಂಬುದಾಗಿ ಈತ ಒಪ್ಪಂದ ಮಾಡಿಕೊಂಡಿದ್ದಾನೆ. ಈ ಎಲ್ಲಾ ನಗರಗಳನ್ನು ಸಿಸ್ಟರ್ ಸಿಟಿ ಎಂಬುದಾಗಿ ಕರೆದಿದ್ದಾನೆ. ಆದರೆ ಆತನ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂಬ ದೇಶವೇ ಕಾಲ್ಪನಿಕವಾಗಿದೆ. ಆ ಮೂಲಕ ಈ ಎಲ್ಲಾ ನಗರಗಳಿಗೆ ವಂಚನೆ ಎಸಗಿದ್ದಾನೆ ಎಂಬುದಾಗಿ ಅಮೆರಿಕಾದ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಕೆಲವು ನಗರದ ಮೇಯರ್ಗಳು, ಸಂಸದರು ಕೂಡಾ ಈತನ ವಂಚನೆ ಜಾಲಕ್ಕೆ ಬಿದ್ದಿದ್ದಾರೆ. ಇನ್ನು ನೆವಾರ್ಕ್ ಜೊತೆಗೆ ಇತ್ತೀಚೆಗಷ್ಟೇ ಒಪ್ಪಂದ ಏರ್ಪಟ್ಟಿರುವ ಬಗ್ಗೆ ಕೈಲಾಸದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಆದರೆ ನೆವಾರ್ಕ್ ಆಡಳಿತವು ಆತನೊಂದಿಗೆ ಯಾವುದೇ ಒಪ್ಪಂದ ಏರ್ಪಟ್ಟಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ವರದಿ ಹೇಳಿದೆ. ಇದೇ ವೇಳೆ ಅವರ ಮನವಿಯನ್ನು ಪರಿಗಣಿಸಿದ್ದೇವೆಯೇ ಹೊರತು ಒಪ್ಪಂದ ಖಚಿತಪಡಿಸಿಲ್ಲ ಎಂದು ನಾರ್ತ್ ಕೆರೋಲಿನಾ ಹೇಳಿಕೊಂಡಿದೆ.