ಲಾಹೋರ್, ಮಾ 15 (DaijiworldNews/MS):ತೋಶಾಖಾನ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಇಮ್ರಾನ್ ಖಾನ್ ಅವರ ಲಾಹೋರ್ ಮನೆಯ ಹೊರಗೆ ಪೊಲೀಸರು ಮತ್ತು ಖಾನ್ ಅವರ ಬೆಂಬಲಿಗರ ನಡುವೆ ಘರ್ಷಣೆ ಮುಂದುವರಿದಿದೆ.
ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾದ ಇಮ್ರಾನ್ ಖಾನ್ ವಿರುದ್ದ ಕೋರ್ಟ್ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿದ ಹಿನ್ನಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಲು ಸಿದ್ದತೆ ಕಾರ್ಯಾಚರಣೆಯು ನಡೆಸುತ್ತಿರುವಂತೆಯೇ ಕರಾಚಿ, ಇಸ್ಲಾಮಾಬಾದ್, ಗ್ಯಾರಿಸನ್ ಸಿಟಿ ರಾವಲ್ಪಿಂಡಿ, ಪೇಶಾವರ್, ಕ್ವೆಟ್ಟಾ ಮತ್ತು ಪಾಕಿಸ್ತಾನದ ಇತರೆಡೆ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಖಾನ್ ಬೆಂಬಲಿಗರು ಮತ್ತು ಪೊಲೀಸರ ನಡುವೆ ಘರ್ಷಣೆಯನ್ನು ಉಂಟಾಗಿದೆ.
ಖಾನ್ ಬೆಂಬಲಿಗರು ಅಧಿಕಾರಿಗಳ ಮೇಲೆ ಕಲ್ಲು- ಇಟ್ಟಿಗೆಗಳನ್ನು ಎಸೆಯುತ್ತಿರುವುದ್ದರಿಂದ ಪೊಲೀಸರು ಅವರ ಮೇಲೆ ಅಶ್ರುವಾಯು ಪ್ರಯೋಗಿಸಿದ್ದಾರೆ. ಖಾನ್ ವಾಸಿಸುವ ಜಮಾನ್ ಪಾರ್ಕ್ನ ಉನ್ನತ ಪ್ರದೇಶವನ್ನು ಬೆಂಬಲಿಗರು ಮುತ್ತಿಗೆ ಹಾಕಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಹೆಚ್ಚುವರಿ ಪೊಲೀಸರನ್ನು ಯೋಜಿಸುತ್ತಿದೆ.
ಇನ್ನು ಘಟನೆಯಲ್ಲಿ ಸುಮಾರು ಹನ್ನೆರಡಕ್ಕೂ ಹೆಚ್ಚು ಪೊಲೀಸರು ಮತ್ತು ಸುಮಾರು 35 ಖಾನ್ ಬೆಂಬಲಿಗರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.