ಇಸ್ಲಾಮಾಬಾದ್, ಮಾ 14 (DaijiworldNews/MS): ಮಹಿಳಾ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಬೆದರಿಕೆ ಹಾಕಿದ ಪ್ರಕರಣದಲ್ಲಿ ಇಸ್ಲಾಮಾಬಾದ್ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಸೋಮವಾರ ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಹಾಗೂ ತೆಹರೀಕ್ ಇ–ಇನ್ಸಾಫ್ (ಪಿಟಿಐ) ಪಕ್ಷದ ನಾಯಕ ಇಮ್ರಾನ್ ಖಾನ್ ವಿರುದ್ದ ಜಾಮೀನು ರಹಿತ ಬಂಧನ ವಾರಂಟ್ಗಳನ್ನು ಹೊರಡಿಸಿದೆ. ಹೀಗಾಗಿ ಇಮ್ರಾನ್ ಖಾನ್ ಅವರನ್ನು ಇಂದು ಪೊಲೀಸರು ಬಂಧಿಸಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ತೋಶಖಾನಾದ ಅಮೂಲ್ಯ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಿ ಬಳಿಕ ಲಾಭ ಗಳಿಸಲು ಮಾರಾಟ ಮಾಡಿದ ಹಾಗೂ ಬೆದರಿಕೆ ಹಾಕಿದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ವಿಫಲರಾದ ಹಿನ್ನಲೆಯಲ್ಲಿ ಇದೇ 18 ಮತ್ತು 21ರಂದು ತಮ್ಮ ಮುಂದೆ ಹಾಜರುಪಡಿಸಬೇಕು ಎಂದು ಇಬ್ಬರು ಜಿಲ್ಲಾ ನ್ಯಾಯಾಧೀಶರು ಪೊಲೀಸರಿಗೆ ಆದೇಶ ನೀಡಿದ್ದಾರೆ. ಇದರ ಬೆನ್ನಲ್ಲೇ ಇಮ್ರಾನ್ ಖಾನ್ ಅವರನ್ನು ಬಂಧಿಸಲು ಇಸ್ಲಾಮಾಬಾದ್ನಿಂದ ಪೊಲೀಸ್ ತಂಡವು ಹೆಲಿಕಾಪ್ಟರ್ನಲ್ಲಿ ಲಾಹೋರ್ಗೆ ತೆರಳಿದೆ ಎಂದು ವರದಿಯಾಗಿದೆ.
ಮುಂದಿನ ಪ್ರಕ್ರಿಯೆಯಲ್ಲಿ ಪ್ರಕರಣದಿಂದ ವಜಾಗೊಳಿಸುವಂತೆ ಕೋರಿ ಇಮ್ರಾನ್ ಸಲ್ಲಿಸಿರುವ ಅರ್ಜಿಯ ಬಗ್ಗೆ ನ್ಯಾಯಾಲಯವು ವಾದಗಳನ್ನು ಆಲಿಸಲಿದೆ ಹಿರಿಯ ಸಿವಿಲ್ ನ್ಯಾಯಾಧೀಶ ರಾಣಾ ಮುಜಾಹಿದ್ ರಹೀಮ್ ಹೇಳಿದ್ದಾರೆ.