ಲಂಡನ್, ಮಾ 07 (DaijiworldNews/DB): ಭಾರತದಲ್ಲಿ ವಿರೋಧ ಪಕ್ಷದ ನಾಯಕರು ಮಾತನಾಡುವಾಗ ಮೈಕ್ಗಳನ್ನೇ ಬಂದ್ ಮಾಡಿ ಬಿಡುವ ಪರಿಸ್ಥಿತಿ ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಲಂಡನ್ನಲ್ಲಿ ಹೇಳಿಕೊಂಡಿದ್ದಾರೆ.
ಯುಕೆ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು ಲಂಡನ್ನ ಹೌಸ್ ಆಫ್ ಕಾಮನ್ಸ್ ನ ಗ್ರ್ಯಾಂಡ್ ಕಮಿಟಿ ರೂಮ್ನಲ್ಲಿ ವಿರೋಧ ಪಕ್ಷ ಲೇಬರ್ ಪಾರ್ಟಿ ಹಿರಿಯ ಸಂಸದ, ಭಾರತೀಯ ಮೂಲದ ವೀರೇಂದ್ರ ಶರ್ಮಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ದ ಕಿಡಿ ಕಾರಿದರು.
ನಮ್ಮ ಸಂಸತ್ತಿನಲ್ಲಿ ಮೈಕ್ಗಳು ಸರಿ ಇಲ್ಲ. ಆದರೆ ಅವರು ಕಾರ್ಯ ನಿರ್ವಹಿಸುತ್ತವೆ. ಆನ್ ಮಾಡಿದರೆ ಆಫ್ ಮಾಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ವಿರೋಧ ಪಕ್ಷಗಳ ನಾಯಕರು ಮಾತನಾಡಿದಾಗಲೆಲ್ಲಾ ಮೈಕ್ಗಳು ಆಫ್ ಆಗುತ್ತವೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.
ಭಾರತದಲ್ಲಿ ನೋಟು ಅಮಾನ್ಯೀಕರಣ ಮಾಡಲಾಯಿತು. ಆದರೆ ಇದರ ಬಗ್ಗೆ ಚರ್ಚಿಸಲು ನಮಗೆ ಅವಕಾಶವೇ ಇರಲಿಲ್ಲ. ಇದೊಂದು ಅನಾಹುತಕಾರಿ ಆರ್ಥಿಕ ನಿರ್ಧಾರವೆಂಬ ಬಗ್ಗೆ ನಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ನಮಗೆ ಯಾವುದೇ ಸಂದರ್ಭ ಸಿಗಲಿಲ್ಲ ಎಂದರು.
ಚೀನಾ ಪಡೆಗಳು ಭಾರತದ ಗಡಿಯೊಳಗೆ ನುಗ್ಗುತ್ತಲೇ ಇದ್ದರೂ ಈ ಬಗ್ಗೆ ಮಾತನಾಡಲು ನಮಗೆ ಅವಕಾಶವಿಲ್ಲ. ಹಿಂದೆಲ್ಲಾ ಸಂಸತ್ತಿನಲ್ಲಿ ಮಹತ್ವದ ಚರ್ಚೆ, ವಾದಗಳು ನಡೆಯುತ್ತಿದ್ದವು. ಅಂತಹ ಸಂಸತ್ತನ್ನು ನಾವು ಈಗ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಈಗ ಒಂದು ರೀತಿಯ ಉಸಿರುಗಟ್ಟಿದ ವಾತಾವರಣವಿದೆ ಎಂದು ರಾಹುಲ್ ವಿಷಾದ ವ್ಯಕ್ತಪಡಿಸಿದರು.