ವಾಷಿಂಗ್ಟನ್, ಮಾ 05 (DaijiworldNews/DB): ನಾನು ಅಮೆರಿಕಾದ ಅಧ್ಯಕ್ಷನಾಗಿ ಆಯ್ಕೆಯಾದಲ್ಲಿ ಚೀನಾದೊಂದಿಗೆ ಯಾವುದೇ ವ್ಯವಹಾರಗಳನ್ನು ನಿರ್ವಹಿಸದಂತೆ ಅಮೆರಿಕನ್ ಸಂಸ್ಥೆಗಳಿಗೆ ನಿರ್ಬಂಧ ಹೇರುವುದಾಗಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ ಭಾರತ ಮೂಲದ ಅಮೆರಿಕನ್ ಉದ್ಯಮಿ ವಿವೇಕ್ ರಾಮಸ್ವಾಮಿ ಹೇಳಿದ್ದಾರೆ.
2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿದ್ದೇನೆ. ಅಧ್ಯಕ್ಷನಾಗಿ ಆಯ್ಕೆಯಾದರೆ ಚೀನಾದೊಂದಿಗೆ ವ್ಯವಹರಿಸುವುದಕ್ಕೆ ನಿರ್ಬಂಧ ಹೇರುತ್ತೇನೆ. ರಾಷ್ಟ್ರೀಯ ಭದ್ರತೆಯ ಕಾಳಜಿಯೊಂದಿಗೆ ಇದನ್ನು ಮಾಡುತ್ತೇನೆ ಎಂದಿದ್ದಾರೆ.
ಚೀನಾವು ಬೌದ್ದಿಕ ಆಸ್ತಿಯನ್ನು ಕಬಳಿಸುತ್ತಿದೆ. ಅಲ್ಲದೆ ಆರ್ಥಿಕ ಬೇಹುಗಾರಿಕೆಯಲ್ಲಿ ತೊಡಗಿದೆ. ಈ ವಿಚಾರದಲ್ಲಿ ಆ ರಾಷ್ಟ್ರವು ಬಹುದೊಡ್ಡ ಇತಿಹಾಸವನ್ನೇ ಹೊಂದಿದೆ. ಹೀಗಾಗಿ ಆ ರಾಷ್ಟ್ರದೊಂದಿಗೆ ಯಾವುದೇ ವ್ಯವಹಾರ ಸಾಧ್ಯವಿಲ್ಲ. ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ. ಅಮೆರಿಕದ ವ್ಯವಹಾರ ಹಾಗೂ ರಾಷ್ಟ್ರೀಯ ಭದ್ರತೆ ರಕ್ಷಣೆ ವಿಚಾರದಲ್ಲಿ ಇಂತಹ ಬಲವಾದ ಕ್ರಮದ ತುರ್ತು ಅಗತ್ಯವಿದೆ ಎಂದವರು ಪ್ರತಿಪಾದಿಸಿದ್ದಾರೆ.