ಸ್ವಿಡ್ಜರ್ಲೆಂಡ್, ಮಾ 02 (DaijiworldNews/MS): ಜಿನಿವಾ ನಗರದಲ್ಲಿ ನಡೆದಿದ್ದ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನ ವೊಂದರಲ್ಲಿ ಬಿಡದಿ ನಿತ್ಯಾನಂದನ ಸ್ವಯಂ ಘೋಷಿತ ಕೈಲಾಸ ದೇಶದ ಪ್ರತಿನಿಧಿಯಾಗಿ ಕೇಸರಿ ಬಟ್ಟೆ, ತಲೆಯ ಮುಡಿ, ಹಣೆಯ ಮೇಲೆ ಬಿಂದಿ ಮತ್ತು ಕೊರಳಲ್ಲಿ ಜಪಮಾಲೆ ಧರಿಸಿ ಇಂಗ್ಲೀಷ್ನಲ್ಲಿ ಭಾಷಣ ಮಾಡುತ್ತಿರುವ ಮಹಿಳೆ ವಿಜಯ ಪ್ರಿಯ ವಿಡಿಯೋ ಎಲ್ಲರ ಗಮನ ಸೆಳೆದಿತ್ತು. ಇದೀಗ ಆಕೆ ಯಾರು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಫೇಸ್ಬುಕ್ ಖಾತೆಯ ಪ್ರಕಾರ, ವಿಜಯಪ್ರಿಯಾ ನಿತ್ಯಾನಂದ ವಿಶ್ವಸಂಸ್ಥೆಯಲ್ಲಿ ಕೈಲಾಸ ದೇಶದ ಖಾಯಂ ರಾಯಭಾರಿಯಾಗಿದ್ದಾರೆ. ವಿಜಯಪ್ರಿಯಾ ನಿತ್ಯಾನಂದ ಅವರು ಯುನೈಟೆಡ್ ಸ್ಟೇಟ್ಸ್ನ ವಾಷಿಂಗ್ಟನ್ ಡಿಸಿ ನಿವಾಸಿ ಎಂದು ಬರೆದುಕೊಂಡಿದ್ದಾರೆ, ವಿಜಯಪ್ರಿಯಾ ಅವರಿಗೆ ನಿತ್ಯಾನಂದನ ದೇಶ ಕೈಲಾಸದಲ್ಲಿ ರಾಜತಾಂತ್ರಿಕ ಸ್ಥಾನಮಾನವಿದೆ.
ಇನ್ನೊಂದು ವರದಿ ಪ್ರಕಾರ ಕೆನಡಾ ಮ್ಯಾನಿಟೋಬಾ ವಿವಿಯಿಂದ ಮೈಕ್ರೋ ಬಯೋಲಾಜಿಯಲ್ಲಿ ಪದವಿ ಪಡೆದುಕೊಂಡಿದ್ದಾರೆ. ಇಂಗ್ಲೀಷ್, ಪ್ರೆಂಚ್, ಕ್ರಿಯೋಲ್ ಮತ್ತಿ ಪಿಜಿನ್ಸ್ ನಲ್ಲಿ ಪ್ರವೀಣರಾಗಿದ್ದು ಕಾಲೇಜು ದಿನಗಳಲ್ಲಿ ಸಾಕಷ್ಟು ಸಾಧನೆ ಮಾಡಿದ್ದರು.ಆದರೆ ವಿಜಯ ಪ್ರಿಯ ಮೂಲತಃ ಭಾರತವರೇ ಎನ್ನುವ ಕುರಿತು ಮಾಹಿತಿ ಲಭ್ಯವಿಲ್ಲ.