ವಾಷಿಂಗ್ಟನ್, ಫೆ 28 (DaijiworldNews/MS): ಟೆಸ್ಲಾ ಮತ್ತು ಟ್ವಿಟರ್ ಸಿಇಒ ಎಲಾನ್ ಮಸ್ಕ್ ಮತ್ತೆ ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ವಿಶ್ವದ ನಂ 1 ಶ್ರೀಮಂತನ ಸ್ಥಾನಕ್ಕೇರಿದ್ದಾರೆ.
ಡಿಸೆಂಬರ್ 2022 ರಲ್ಲಿ ಟೆಸ್ಲಾ ಷೇರುಗಳು ಕುಸಿದ ನಂತರ ಅರ್ನಾಲ್ಟ್ ಮೊದಲ ಸ್ಥಾನದಿಂದ ಕೆಳಗಿಳಿದ್ದರು.ಫ್ರೆಂಚ್ ಐಷಾರಾಮಿ ಬ್ರಾಂಡ್ 'ಲೂಯಿ ವಿಟಾನ್' ಸಿಇಒ ಬರ್ನಾರ್ಡ್ ಆರ್ನಾಲ್ಟ್ ಅವರು, ಮಸ್ಕ್ ಅವರನ್ನು ಹಿಂದಿಕ್ಕಿದ್ದರು.
ಎರಡು ತಿಂಗಳ ಕಾಲ ಎರಡನೇ ಸ್ಥಾನದಲ್ಲಿದ್ದ ಮಸ್ಕ್ ಅವರನ್ನು ಟೆಸ್ಲಾ ಷೇರುಗಳ ಮೌಲ್ಯ ಹೆಚ್ಚಳವು ಮತ್ತೆ ಅಗ್ರಸ್ಥಾನಕ್ಕೆ ತಂದು ಕೂರಿಸಿದೆ. ಸೋಮವಾರ ಷೇರು ಪೇಟೆ ಮುಕ್ತಾಯದ ಬಳಿಕ ಎಲಾನ್ ಮಸ್ಕ್ ಸಂಪತ್ತಿನ ಮೌಲ್ಯ 187.1 ಬಿಲಿಯನ್ ಡಾಲರ್ ಆಗಿದ್ದು, 185.3 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿರುವ ಆರ್ನಾಲ್ಟ್ ಅವರನ್ನು ಹಿಂದಿಕ್ಕಿದ್ದಾರೆ. ಈ ವರ್ಷ ಟೆಸ್ಲಾ ಷೇರುಗಳ ಮೌಲ್ಯ ಶೇ.70ರಷ್ಟು ಹೆಚ್ಚಿರುವುದು ಮಸ್ಕ್ ಸಂಪತ್ತು ವೃದ್ಧಿಗೆ ಕಾರಣ ಎಂದು ವರದಿ ತಿಳಿಸಿದೆ.
ಇನ್ನು ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಬರ್ನಾರ್ಡ್ ಅರ್ನಾಲ್ಟ್ $206.3 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಅಗ್ರಸ್ಥಾನದಲ್ಲಿ ಉಳಿದಿದ್ದಾರೆ. ಇಲ್ಲಿ, ಮಸ್ಕ್ $197.7 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಜೆಫ್ ಬೆಜೋಸ್, ಒರಾಕಲ್ ಸಹ-ಸಂಸ್ಥಾಪಕ ಲ್ಯಾರಿ ಎಲಿಸನ್, ವಾರೆನ್ ಬಫೆಟ್ ಮತ್ತು ಬಿಲ್ ಗೇಟ್ಸ್ ಕ್ರಮವಾಗಿ $117 ಬಿಲಿಯನ್, $113 ಬಿಲಿಯನ್, $106 ಬಿಲಿಯನ್ ಮತ್ತು $105.2 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಸ್ಥಾನಗಳನ್ನು ಹೊಂದಿದ್ದಾರೆ.