ನ್ಯೂಯಾರ್ಕ್, ಫೆ 22 (DaijiworldNews/DB): ಭಾರತೀಯ ಮೂಲದ ಅಮೆರಿಕನ್ ಟೆಕ್ ಉದ್ಯಮಿ ವಿವೇಕ್ ರಾಮಸ್ವಾಮಿ ಅವರು 2024ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.
ಮೂಲತಃ ಕೇರಳದವರಾದ 37 ವರ್ಷದ ವಿವೇಕ್ ,ನಿಕ್ಕಿ ಹ್ಯಾಲೆ ಬಳಿಕ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಭಾರತ ಮೂಲದ ಎರಡನೇ ವ್ಯಕ್ತಿಯಾಗಿದ್ದಾರೆ. ಚೀನಾದ ಮೇಲೆ ಅಮೆರಿಕಾದ ಅವಲಂಬನೆ ಕೊನೆಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ. ವಿಶೇಷವೆಂದರೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ರಿಪಬ್ಲಿಕನ್ ಪಕ್ಷದ ಪರವಾಗಿ ಸ್ಪರ್ಧಾ ಕಣದಲ್ಲಿದ್ದಾರೆ.
ತಾವು ಚುನಾವಣೆಗೆ ಸ್ಪರ್ಧಿಸುವ ವಿಚಾರವನ್ನು ರಾಜಕೀಯ ವಿಶ್ಲೇಷಕ ಟಕರ್ ಕಾರ್ಲ್ಸನ್ ಅವರ ಫಾಕ್ಸ್ ನ್ಯೂಸ್ ಪ್ರೈಮ್ ಟೈಮ್ ಶೋನಲ್ಲಿ ರಾಮಸ್ವಾಮಿ ಘೋಷಣೆ ಮಾಡಿದ್ದಾರೆ. 2014ರಲ್ಲಿ ರೋವೆಂಟ್ ಸೈನ್ಸಸ್ ಆರಂಭಿಸಿದ ಅವರು, 2016ರ ಅತಿದೊಡ್ಡ ಬಯೋಟೆಕ್ ಐಪಿಒದಲ್ಲಿ ಜವಾಬ್ದಾರಿ ನಿರ್ವಹಿಸಿದರು. 2022ರಲ್ಲಿ, ಸ್ಟ್ರೈವ್ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆ ಹುಟ್ಟು ಹಾಕಿದ್ದಾರೆ.