ವಾಷಿಂಗ್ಟನ್, ಫೆ 15 (DaijiworldNews/MS): ಭಾರತೀಯ ಮೂಲದ , ದಕ್ಷಿಣ ಕೆರೊಲಿನಾದ ಮಾಜಿ ಗವರ್ನರ್ ನಿಕ್ಕಿ ಹ್ಯಾಲೆ ನೀ ನಿಮ್ರತಾ ರಾಂಧವಾ ಅವರು 2024 ರಲ್ಲಿ ಅಮೆರಿಕ ಅಧ್ಯಕ್ಷೀಯ ಸ್ಥಾನ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಸಂಶಯಗಳಿಗೆ ತೆರೆ ಎಳೆದಿದ್ದಾರೆ.
ನಿಕ್ಕಿ, ವಿಡಿಯೋ ಮೂಲಕ ತಮ್ಮ ಸ್ಪರ್ಧೆ ಖಚಿತಪಡಿಸಿ ,"ಹೊಸ ಪೀಳಿಗೆಯ ನಾಯಕತ್ವಕ್ಕೆ ಸಮಯವಿದು "ಎಂದ ಅವರು ರಿಪಬ್ಲಿಕನ್ ಪಕ್ಷದಿಂದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ನ ಮೊದಲ ಪ್ರತಿಸ್ಪರ್ಧಿಯಾಗಿದ್ದಾರೆ.
ಅಮೆರಿಕ ನಮ್ಮ ಹೆಮ್ಮೆ, ಈ ದೇಶದ ಗಡಿ, ಅರ್ಥಿಕತೆಯನ್ನು ಬಲಪಡಿಸಲು ಹೊಸ ಪೀಳಿಗೆ ಅಧಿಕಾರ ವಹಿಸಿಕೊಳ್ಳುವುದು ಅಗತ್ಯ ಎಂದು ಹ್ಯಾಲೆ ಹೇಳಿದ್ದಾರೆ.
ನಿಕ್ಕಿ ಮೂಲತಃ ಭಾರತೀಯ ಪಂಜಾಬಿ ಸಿಖ್ ಮೂಲದವರು. ತಂದೆ ಅಜಿತ್ ಸಿಂಗ್ ರಾಂಧವಾ ಮತ್ತು ತಾಯಿ ರಾಜ್ ಕೌರ್ ಪಂಜಾಬ್ನ ಅಮೃತಸರದಿಂದ ದಕ್ಷಿಣ ಕೆರೊಲಿನಾಕ್ಕೆ ವಲಸೆ ಬಂದು ನೆಲೆಸಿದ್ದರು. ವಿಶ್ವಸಂಸ್ಥೆಗೆ ಅಮೆರಿಕ ರಾಯಭಾರಿಯಾಗಿದ್ದ, ದಕ್ಷಿಣ ಕರೋಲಿನಾದ 2 ಅವಧಿಯ ಗವರ್ನರ್ ಕೂಡ ಆಗಿದ್ದ ಹ್ಯಾಲೆ ಪ್ರಭಾವಿ ರಾಜಕಾರಣಿಯಾಗಿದ್ದಾರೆ.