ಕಹ್ರಾಮನ್ಮರಸ್, ಫೆ 12 (DaijiworldNews/DB): ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದಿಂದಾಗಿ ಸಾವನ್ನಪ್ಪುವವರ ಸಂಖ್ಯೆ 50 ಸಾವಿರ ಗಡಿ ದಾಟುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯ ಮಾನವೀಯ ನೆರವು ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಆತಂಕ ವ್ಯಕ್ತಪಡಿಸಿದ್ದಾರೆ.
ಭೂಕಂಪಪೀಡಿತ ದೇಶಗಳ ಪರಿಸ್ಥಿತಿ ಅವಲೋಕನಕ್ಕಾಗಿ ಟರ್ಕಿಯ ದಕ್ಷಿಣ ನಗರವಾದ ಕಹ್ರಾಮನ್ಮರಸ್ಗೆ ತೆರಳಿರುವ ಅವರು, ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡರು.
ಭೀಕರ ಭೂಕಂಪದಿಂದಾಗಿ ಈಗಾಗಲೇ 28 ಸಾವಿರಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ಹಲವರು ಇನ್ನೂ ಅವಶೇಷಗಳಡಿ ಬಾಕಿಯಾಗಿದ್ದಾರೆ. ಈ ಸಂಖ್ಯೆ ದ್ವಿಗುಣಗೊಳ್ಳಬಹುದು. ಸಾವಿನ ಸಂಖ್ಯೆ 50 ಸಾವಿರ ಗಡಿ ದಾಟುವ ಸಾಧ್ಯತೆ ಇದೆ ಎಂದರು.
ಅವಶೇಷಗಳಡಿ ಸಿಲುಕಿರುವ ನಿಖರ ಸಂಖ್ಯೆ ಪತ್ತೆ ಹಚ್ಚುವುದು ಅಸಾಧ್ಯ. ಆದರೆ ಸಾವು ಹೆಚ್ಚಾಗಬಹುದು. ಸಾವನ್ನಪ್ಪಿದವರ ನಿಖರ ಸಂಖ್ಯೆಯೂ ತಿಳಿದು ಬಂದಿಲ್ಲ. ಮಾನವೀಯ ನೆರವು ಏಜೆನ್ಸಿಗಳು ಭೂಕಂಪಪೀಡಿತರನ್ನು ನೋಡಿಕೊಳ್ಳಲಿದ್ದಾರೆ ಎಂದವರು ತಿಳಿಸಿದರು.
ಟರ್ಕಿ ಮತ್ತು ಸಿರಿಯಾ ಸೇರಿದತೆ 2.6 ಕೋಟಿ ಜನರ ಜೀವನಕ್ಕೆ ಭೂಕಂಪದಿಂದಾಗಿ ಭಾರೀ ತೊಂದರೆ ಉಂಟಾಗಿದೆ. ಸದ್ಯ ತಾತ್ಕಾಲಿಕ ಟೆಂಟ್ಗಳಿಗೆ ಅವರನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿದು ಬಂದಿದೆ.