ಜೋಧ್ಪುರ, ಮಾ 02(SM): ಭಾರತ-ಪಾಕಿಸ್ತಾನ ನಡುವೆ ಸದ್ಯ ಉದ್ವಿಗ್ನ ಪರಿಸ್ಥಿತಿ ಇದೆ. ಪಾಕ್ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆಗೊಳಿಸಲಾಗಿದೆ. ಈ ನಡುವೆ ಇದೀಗ ಭಾರತ-ಪಾಕ್ ನಡುವಿನ ಸ್ನೇಹದ ಕೊಂಡಿ ಮತ್ತೆ ಜೋಡಣೆಯಾಗಿದ್ದು, ಥಾರ್ ಎಕ್ಸ್ಪ್ರೆಸ್ ರೈಲು ನಿನ್ನೆ ರಾತ್ರಿ ಪಾಕ್ನತ್ತ ಪ್ರಯಾಣ ಬೆಳೆಸಿದೆ.
ಜೋಧ್ಪುರದ ಭಗತ್ ಕೋಠಿ ರೈಲ್ವೆ ನಿಲ್ದಾಣದಿಂದ ಥಾರ್ ಎಕ್ಸ್ ಪ್ರೆಸ್ ಪಾಕ್ ನತ್ತ ಪ್ರಯಾಣ ಬೆಳೆಸಿದೆ. ಸುಮಾರು 300 ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಭಾರತ-ಪಾಕ್ ನಡುವೆ ಸ್ನೇಹ ಸಂಬಂಧದ ಸಂಕೇತವಾಗಿ ಥಾರ್ ಎಕ್ಸ್ಪ್ರೆಸ್ ಓಡಾಡುತ್ತಿದೆ.
1965ರ ತನಕ ಉಭಯ ದೇಶಗಳ ನಡುವೆ ಸ್ನೇಹದ ಕೊಂಡಿಯಂತೆ ರೈಲು ಸಂಚರಿಸುತ್ತಿತ್ತು. ಆದರೆ ಬಳಿಕ ನಡೆದಂತಹ ಬೆಳವಣಿಗೆಗಳಿಂದಾಗಿ ರೈಲು ಸಂಚಾರ ಸ್ಥಗಿತಗೊಂಡಿತ್ತು. 2006ರಿಂದ ಮತ್ತೆ ಸಂಚಾರ ಆರಂಭಗೊಂಡಿತ್ತು. ಮೊನ್ನೆಯಷ್ಟೇ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಸಂಚಾರ ಆರಂಭಗೊಂಡಿದೆ.
ಕಳೆದ ಕೆಲವು ದಿನಗಳಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದಾಗಿ ಭಾರತ ಹಾಗೂ ಪಾಕ್ ನಡುವೆ ರೈಲು ಸಂಚಾರ ಹಾಗೂ ವಿಮಾನ ಹಾರಾಟ ಸ್ಥಗಿತಗೊಂಡಿತ್ತು. ಇದೀಗ ರೈಲು ಪ್ರಯಾಣ ಬೆಳೆಸಿದೆ. ಆದರೆ, ಉಭಯ ರಾಷ್ಟ್ರಗಳ ನಡುವೆ ಸದ್ಯದ ಪರಿಸ್ಥಿತಿ ಹೇಳುವಷ್ಟರ ಮಟ್ಟಿಗೆ ಚೆನ್ನಾಗಿಲ್ಲ. ಪಾಕ್ ಉಗ್ರರು ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಲೇ ಇದೆ. ಆದರೆ, ಭಾರತೀಯರು ಮಾತ್ರ ತಾಳ್ಮೆಯಿಂದ ಸರಿಯಾದ ಸಂದರ್ಭಕ್ಕಾಗಿಯೇ ಎದುರು ನೋಡುತ್ತಿದ್ದಾರೆ.