ನವದೆಹಲಿ, ಫೆ 28(SM): ಪುಲ್ವಾಮಾ ದಾಳಿಗೆ ಭಾರತೀಯ ವಾಯುಸೇನೆಯ ದಾಳಿಗೆ ತಿರುಗೇಟು ನೀಡಲು ಮುಂದಾಗಿದ್ದ ಪಾಕಿಸ್ತಾನ ವಿಫಲತೆ ಅನುಭವಿಸಿ ಭಾರತಕ್ಕೆ ಶರಣಾಗಿದೆ. ಮಿಗ್-21 ಯುದ್ಧ ವಿಮಾನ ಪತನಗೊಂಡ ಬಳಿಕ ನಾಪತ್ತೆಯಾಗಿದ್ದ ಕಮಾಂಡರ್ ಸದ್ಯ ಪಾಕ್ ವಶದಲ್ಲಿದ್ದಾರೆ. ಅವರನ್ನು ಬಿಡುಗಡೆಗೊಳಿಸಲು ಪಾಕಿಸ್ತಾನ ನಿರ್ಧರಿಸಿದೆ.
ವಿಂಗ್ ಕಮಾಂಡರ್ ಅಭಿನಂದನ್ ರನ್ನು ಬಿಡುಗಡೆಗೊಳಿಸುವುದಾಗಿ ಪಾಕಿಸ್ತಾನದ ಸಂಸತ್ ನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಘೋಷಣೆ ಮಾಡಿದ್ದಾರೆ. ಆ ಮೂಲಕ ಭಾರತಕ್ಕೆ ಬಹುದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದಂತಾಗಿದೆ. ಆ ಮೂಲಕ ಅಂತಾರಾಷ್ಟ್ರೀಯ ಒತ್ತಡಕ್ಕೆ ಪಾಕ್ ಮಣಿದಂತಾಗಿದೆ.
ಉಭಯ ದೇಶಗಳ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾದ ಕಾರಣ ವಿಶ್ವದ ವಿವಿಧ ರಾಷ್ಟ್ರಗಳು ಪಾಕ್ ವಿರುದ್ಧ ಹರಿಹಾಯ್ದು ಭಾರತಕ್ಕೆ ಬೆಂಬಲ ಸೂಚಿಸಿದ್ದವು. ಇದು ಕೂಡ ಪಾಕಿಸ್ತಾನಕ್ಕೆ ಹಿನ್ನಡೆಯಾದಂತಾಗಿದೆ. ಜಮ್ಮು ಕಾಶ್ಮೀರದಲ್ಲಿ ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನ ಪತನಗೊಂಡ ನಂತರ ನಾಪತ್ತೆಯಾಗಿದ್ದ ವಿಂಗ್ ಕಮಾಂಡರ್ ಅಭಿನಂದನ್ ಪಾಕ್ ವಶದಲ್ಲಿರುವುದಾಗಿ ಹೇಳಿಕೊಂಡಿತ್ತು.