ಆ 16 (DaijiworldNews/MS): ಹಾವುಗಳೇಕೆ ತೆವಳುತ್ತಾ ಹೋಗುತ್ತವೆ ಎಂದು ಕೇಳಿದರೆ, ಅವುಗಳಿಗೆ ಕಾಲುಗಳಿಲ್ಲವಲ್ಲ ಎಂಬ ಉತ್ತರ ಥಟ್ಟನೆ ಬರುತ್ತದೆ. ಹಾವುಗಳಿಗೆ ಈಗ ಕಾಲು ಇಲ್ಲದೇ ಇರಬಹುದು. ಆದರೆ 100 ದಶಲಕ್ಷ ವರ್ಷಗಳಷ್ಟು ಹಿಂದೆ ಹಾವುಗಳಿಗೂ ಕಾಲುಗಳು ಇದ್ದವು ಎಂದು ಸಂಶೋಧನೆಗಳು ತಿಳಿಸುತ್ತವೆ.
ಸದ್ಯ ಯೂಟ್ಯೂಬರ್ ಓರ್ವ ಹಾವು ನಡೆಯಲು ಸಹಾಯ ಮಾಡಲು ರೋಬೋಟಿಕ್ ಕಾಲುಗಳನ್ನು ಕಂಡುಹಿಡಿದಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಗಮನ ಸೆಳೆದಿವೆ.
ಅಲೆನ್ ಪ್ಯಾನ್ ಎಂಬಾತ ಯೂಟ್ಯೂಬರ್ ಕಂಟೆಂಟ್ ಪ್ರೊಡ್ಯೂಸರ್ ಆಗಿದ್ದು , ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹಾವುಗಳಿಗೆ ನಡೆದಾಡಲು ರೋಬೋಟಿಕ್ ಕಾಲಿನ ಬಗ್ಗೆ ವೀಡಿಯೊವನ್ನು ಬಿಡುಗಡೆ ಮಾಡಿದ್ದು ಇದು ಎಲ್ಲರ ಗಮನ ಸೆಳೆದಿದೆ.
" ಹಾವುಗಳಿಗೆ ತಮ್ಮ ಕಾಲುಗಳನ್ನು ಹಿಂತಿರುಗಿಸುವುದು" ಎಂಬ ಶೀರ್ಷಿಕೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಅಲೆನ್ ಪ್ಯಾನ್ ತಾಂತ್ರಿಕ ಜ್ಞಾನದ ಮೂಲಕ ವಿನೂತನ ಆವಿಷ್ಕಾರಗಳನ್ನು ಮನೆಯಲ್ಲಿ ತಯಾರಿಸುತ್ತಾರೆ . ಅಲ್ಲದೆ ಅದನ್ನು ಯೂಟ್ಯೂಬ್ ನಲ್ಲಿ ಹಂಚಿಕೊಂಡು ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತಾರೆ.
ತಾನೊಬ್ಬ "ಉರಗ ಪ್ರೇಮಿ" ಎಂದು ತೋರಿಸಲು ಈ ರೋಬೋಟಿಕ್ ಕಾಲು ಕಂಡುಹಿಡಿಯುವ ಪ್ರಯತ್ನ ಮಾಡಿದ್ದೇನೆ ಎಂದು ಯೂಟ್ಯೂಬರ್ ಹೇಳಿದ್ದಾರೆ.
"ಕೊನೆ ಪಕ್ಷ ಯಾರಾದರೂ ಓರ್ವರಾದರೂ , ಹಾವುಗಳು ತಾವು ಕಳೆದುಕೊಂಡ ಕಾಲುಗಳನ್ನು ಹಿಂತಿರುಗಿಸಲು ಮುತುವರ್ಜಿ ತೋರುತ್ತಾರೆ " ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ವಿಡಿಯೋಗೆ ಇದುವರೆಗೆ 2 ಮಿಲಿಯನ್ಗೂ ಹೆಚ್ಚು ವೀಕ್ಷಣೆಗಳು ಮತ್ತು 1.1 ಲಕ್ಷಕ್ಕೂ ಹೆಚ್ಚು ಲೈಕ್ಗಳು ಬಂದಿವೆ.