ಕೈವ್, ಮೇ 06 (DaijiworldNews/DB): ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಭಾನುವಾರ ನಡೆಯುವ ವೀಡಿಯೋ ಕಾನ್ಫರೆನ್ಸ್ನಲ್ಲಿ ಜಿ7 ನಾಯಕರು ಪಾಲ್ಗೊಳ್ಳಲಿದ್ದಾರೆ.
ಈ ಬಗ್ಗೆ ಸುದ್ದಿಸಂಸ್ಥೆಗಳಿಗೆ ಮಾಹಿತಿ ನೀಡಿರುವ ಜರ್ಮನ್ ಸರ್ಕಾರದ ವಕ್ತಾರರು, ರಷ್ಯಾವು ಉಕ್ರೇನ್ ಮೇಲೆ ಸಮರ ಸಾರಿದ್ದಲ್ಲಿಂದ ಇಲ್ಲಿಯವರೆಗೆ ಉಕ್ರೇನ್ನ ಪರಿಸ್ಥಿತಿ ಕುರಿತು ಈ ಕಾನ್ಫರೆನ್ಸ್ನಲ್ಲಿ ಮಾತುಕತೆ ನಡೆಯಲಿದೆ.
ಅಲ್ಲದೆ, ಯುರೋಪಿನಲ್ಲಿ ಭಯೋತ್ಪಾದನೆ, ವಿನಾಶ ಮತ್ತು ಹಲವಾರು ಸಾವು-ನೋವುಗಳಿಗೆ ಕಾರಣವಾದ ಎರಡನೇ ಮಹಾಯುದ್ಧದ ಅಂತ್ಯವನ್ನು ಗುರುತಿಸುವ ಐತಿಹಾಸಿಕ ದಿನವಾಗಿ ಮೇ 8 ರೂಪು ತಳೆಯಲಿದೆ ಎಂದು ಅವರು ತಿಳಿಸಿರುವುದಾಗಿ ವರದಿಗಳು ಹೇಳಿವೆ.
ಉಕ್ರೇನ್ನಲ್ಲಿ ರಷ್ಯಾ ಯುದ್ದ ಸಾರಿದ್ದರಿಂದಾಗಿ ಹಲವಾರು ಸಾವು ಸಂಭವಿಸಿದೆ. ಅದೆಷ್ಟೋ ಜನರು ಗಾಯಾಳುಗಳಾಗಿದ್ದಾರೆ. ಅನ್ನಾಹಾರಕ್ಕೂ ಪರದಾಡುವ ಪರಿಸ್ಥಿತಿ ಸದ್ಯ ಅಲ್ಲಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಅಂತ್ಯ ಹಾಡುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಜಿ7 ನಾಯಕರ ಪಾಲ್ಗೊಳ್ಳುವಿಕೆ ಈ ವೀಡಿಯೋ ಕಾನ್ಫರೆನ್ಸ್ನಲ್ಲಿ ತೀರಾ ಅಗತ್ಯವಾಗಿದೆ ಎಂದವರು ಪ್ರತಿಪಾದಿಸಿದ್ದಾರೆ.