ಪ್ಯಾಲೆಸ್ತೀನ್, ಜೂ 16 (DaijiworldNews/MS): ಕದನ ವಿರಾಮದಿಂದ ಕೆಲವು ದಿನಗಳ ಕಾಲ ಶಾಂತವಾಗಿದ್ದ ಇಸ್ರೇಲ್-ಗಾಜಾದಲ್ಲಿ ಮತ್ತೆ ವಾಯುದಾಳಿ ಆರಂಭವಾಗಿದೆ. ಗಾಜಾದಲ್ಲಿನ ಪ್ಯಾಲೆಸ್ತೀನಿಯ ಉಗ್ರರು ಅಗ್ನಿಸ್ಪರ್ಶದ ಬಲೂನ್ ಹಾರಿಸಿದ ಬಳಿಕ ಇಸ್ರೇಲ್ ಕೂಡಾ ಗಾಜಾ ಪಟ್ಟಿಯ ಮೇಲೆ ವೈಮಾನಿಕ ದಾಳಿ ನಡೆಸಿದೆ.
ಕಳೆದ ತಿಂಗಳು ಉಭಯ ಪಕ್ಷಗಳ ನಡುವೆ ನಡೆದ ಸಂಘರ್ಷದಲ್ಲಿ ನೂರಾರು ಜನ ಹತ್ಯೆಯಾದ ಬಳಿಕ ಕದನ ವಿರಾಮ ಘೋಷಿಸಲಾಗಿತ್ತು. ಮೇ ೨೧ರ ಕದನ ವಿರಾಮದ ಬಳಿಕ ಇಸ್ರೇಲ್ ನಡೆಸಿದ ಮೊದಲ ದಾಳಿ ಇದಾಗಿದೆ. ಮೇ ತಿಂಗಳಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೀನಿಯರ ನಡುವೆ 11 ದಿನಗಳ ಕಾಳಗ ನಡೆದಿತ್ತು. ಇದರಲ್ಲಿ 260 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದರೆ, 13 ಮಂದಿ ಇಸ್ರೇಲ್ ಜನರು ಸಾವನ್ನಪ್ಪಿದ್ದರು. ಬೆಂಜಮಿನ್ ನೆತನ್ಯಾಹು ಪದಚ್ಯುತಿಯ ಬಳಿಕ ನಫ್ತಾಲಿ ಬೆನೆಟ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಡೆದ ಮೊದಲ ದಾಳಿಯೂ ಇದಾಗಿದೆ.
ಫೆಲೆಸ್ತೀನಿ ಮೂಲಗಳ ಪ್ರಕಾರ, ಇಸ್ರೇಲ್ ವಾಯುಪಡೆ ಗಾಝಾಪಟ್ಟಿಯ ದಕ್ಷಿಣಕ್ಕಿರುವ ಖಾನಾ ಯೂನಿಸ್ನ ಪೂರ್ವದ ಕೇಂದ್ರವನ್ನು ಗುರಿ ಮಾಡಿ ದಾಳಿ ನಡೆಸಿದೆ. ಇದಕ್ಕೆ ಉತ್ತರವಾಗಿ ಸ್ಫೋಟಕಗಳಿರುವ ಬಲೂನ್ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ನ ರಕ್ಷಣಾ ಪಡೆ ಹೇಳಿಕೊಂಡಿದೆ. ಯುದ್ಧವಿಮಾನಗಳು ಹಮಾಸ್ ಸಂಘಟನೆಯ ಮಿಲಿಟರಿ ಆವರಣ ಗೋಡೆಯ ಮೇಲೆ ದಾಳಿ ನಡೆಸಿವೆ ಎಂದು ರಕ್ಷಣಾ ಇಲಾಖೆ ಹೇಳಿದೆ.