ಜಿನೇವಾ, ಎ.23 (DaijiworldNews/PY) : ಕೊರೊನಾ ವೈರಸ್ ಸೋಂಕಿಗೆ ಸೂಕ್ತ ಚಿಕಿತ್ಸೆ ಅಥವಾ ಲಸಿಕೆ ಸಿಗುವವರೆಗೂ ಲಾಕ್ಡೌನ್ನಂತಹ ಕಟ್ಟನಿಟ್ಟಾದ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯ ಎಂದು ವಿಶ್ವ ಸಂಸ್ಥೆ ಮತ್ತು ಆರೋಗ್ಯ ತಜ್ಞರು ಹೇಳಿದ್ದಾರೆ.
ಜಾಗತಿಕ ಪಿಡುಗಿಗಾಗಿ ಪರಿಣಮಿಸಿರುವ ಕೊರೊನಾ ಸೋಂಕಿನ ಬಿಕ್ಕಟ್ಟು ತಕ್ಷಣವೇ ಕೊನೆಗೊಳ್ಳುವ ಯಾವುದೇ ಸೂಚನೆಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಚೀನಾದಲ್ಲಿ ಮೊದಲು ಈ ಸೋಂಕು ಕಾಣಿಸಿಕೊಂಡಿದ್ದು, ನಂತರ ಇಟಲಿ, ಸ್ಪೇನ್, ಪ್ರಾನ್ಸ್, ಇಂಗ್ಲೆಂಡ್ ಸೇರಿದಂತೆ ಅಮೆರಿಕಾದಲ್ಲಿ ಲಕ್ಷಾಂತರ ಜನರ ಪ್ರಾಣವನ್ನು ಬಲಿಪಡೆದುಕೊಂಡಿದೆ. ಅಲ್ಲದೇ ಭಾರತದಲ್ಲೂ ಈ ಮಹಾಮಾರಿ ಕೊರೊನಾ ವ್ಯಾಪಕವಾಗಿ ಹರಡಿದೆ.
ಈಗಾಗಲೇ ಜಗತ್ತಿನಾದ್ಯಂತ ಕೊರೊನಾ ಸಾಂಕ್ರಾಮಿಕ ಪಿಡುಗು 180,000ಕ್ಕೂ ಅಧಿಕ ಜನರ ಪ್ರಾಣವನ್ನು ಬಲಿ ಪಡೆದಿದ್ದು, ಈ ಸೋಂಕಿನಿಂದ ಸುಮಾರು 2.6 ದಶಲಕ್ಷ ಜನರು ಬಳಲುತ್ತಿದ್ದಾರೆ.
ಕೊರೊನಾ ವೈರಸ್ ಸೋಂಕನ್ನು ನಿಯಂತ್ರಿಸಲು ಬಹುತೇಕ ರಾಷ್ಟ್ರಗಳು ಸಾಮಾಜಿಕ ಅಂತರ ಹಾಗೂ ಲಾಕ್ಡೌನ್ನಂತಹ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಂಡಿವೆ. ಆದರೂ ಕೊರೊನಾ ಸೋಂಕಿನ ಹಾವಳಿ ಮಾತ್ರ ನಿಂತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಲಾಕ್ಡೌನ್ನಿಂದ ಹಾನಿಗೊಳಗಾದ ಆರ್ಥಿಕತೆಯನ್ನು ಸರಿಪಡಿಸಲು ಮುಂದಿನ ದಿನಗಳಲ್ಲಿ ಹಲವು ದೇಶಗಳು ಪ್ರಯತ್ನಿಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.