ವುಹಾನ್, ಏ 17 (Daijiworld News/MSP): ಕೊರೊನಾ ವೈರಸ್ ಸೋಂಕಿತರು ಮತ್ತು ಸಾವಿನ ಬಗ್ಗೆ ಚೀನಾ ವರದಿ ಮಾಡಿರುವ ಅಂಕಿಅಂಶಗಳ ಬಗ್ಗೆ ಸಂದೇಹವಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲೇ ಈ ಅನುಮಾನ ವ್ಯಕ್ತವಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಚೀನಾ ಕೊರೊನಾಗೆ ಮೃತಪಟ್ಟವರ ಸಂಖ್ಯೆಯನ್ನು ಹೆಚ್ಚಳ ಮಾಡಿ ಪರಿಷ್ಕೃತ ಸಂಖ್ಯೆ ಬಿಡುಗಡೆ ಮಾಡಿದೆ.
ಈ ಹಿಂದೆ ಚೀನಾ 3342 ಜನರು ಕೊರೊನಾದಿಂದ ಮೃತಪಟ್ಟಿದ್ದರು ಎಂದು ಹೇಳಿತ್ತು. ಆದರೆ ಇದೀಗ ಪರಿಷ್ಕೃತ ಅಂಕಿಅಂಶ ಬಿಡುಗಡೆಮಾಡಿದ್ದು ದೇಶದಾದ್ಯಂತ ಸಾವಿನ ಸಂಖ್ಯೆ ಪ್ರಮಾಣವನ್ನು ಶೇ.39 ರಷ್ಟು ಹೆಚ್ಚಿಸಿ, ಕೋವಿಡ್-19ಗೆ ಒಟ್ಟು 4632 ಜನರು ಬಲಿಯಾಗಿದ್ದಾರೆ ಎಂದು ಹೇಳಿದೆ.
ವೈರಸ್ ಸೋಂಕಿನ ಪ್ರಾರಂಭದ ದಿನಗಳಲ್ಲಿ ಚಿಕಿತ್ಸೆ ಕಡೆಗೆ ಸರ್ಕಾರ ಹಾಗೂ ವೈದ್ಯಕೀಯ ಸಿಬ್ಬಂದಿ ಗಮನ ಹರಿಸಿದ್ದರಿಂದ ಪ್ರಕರಣಗಳು ಸರಿಯಾಗಿ ದಾಖಲಾಗಿರಲಿಲ್ಲ. ಕೆಲವು ಸಾವಿನ ಪ್ರಕರಣಗಳು ದಾಖಲಾಗಿರಲಿಲ್ಲ ಹಾಗೂ ಇನ್ನು ಮನೆಗಳಲ್ಲಿ ಮೃತಪಟ್ಟ ಪ್ರಕರಣಗಳು ಲೆಕ್ಕಕ್ಕೆ ಸಿಕ್ಕಿರಲಿಲ್ಲ ಎಂದಿದೆ.
ಕೊರೊನಾ ತವರೂರು ವುಹಾನ್ ನಗರದಲ್ಲಿ ಸಾವಿನ ಸಂಖ್ಯೆಯಲ್ಲಿ ಶೇ. 50ರಷ್ಟು ಹೆಚ್ಚಳವಾಗಿದ್ದು 3869 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟಾರೆ ಚೀನಾ ಹೊಸ 1290 ಸಾವಿನ ಪ್ರಕರಣಗಳನ್ನು ಸೇರಿಸಿದೆ.