ಬೀಜಿಂಗ್, ಮಾ.21 (Daijiworld News/MB) : ಕೊರೊನಾ ವೈರಸ್ ಮೊದಲ ಬಾರಿಗೆ ಕಂಡು ಬಂದ ಚೀನಾದಲ್ಲಿ ಈಗ ಕೊರೊನಾ ವೈರಸ್ ಸೋಂಕು ಹರಡುವಿಕೆ ಸ್ಥಗಿತವಾದ ಲಕ್ಷಣಗಳು ಕಂಡು ಬಂದಿದ್ದು ಸತತ ಮೂರನೇ ದಿನವೂ ಕೊರೊನಾ ಸೋಂಕು ತಗುಲಿರುವ ಹೊಸ ಪ್ರಕರಣಗಳು ದಾಖಲಾಗಿಲ್ಲ.
ವಿಶ್ವದಾದ್ಯಂತ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಕ್ರಮ ಕೈಗೊಳ್ಳಲಾಗುತ್ತಿದ್ದು ಚೀನಾದಲ್ಲಿ ಸೋಂಕಿನ ಪ್ರಮಾಣ ಕಳೆದ ವಾರದಿಂದ ಕಡಿಮೆಯಾಗಿದೆ.
ಇನ್ನೂ ಈ ಕೊರೊನಾ ವೈರಸ್ ಮೊದಲ ಬಾರಿಗೆ ಪತ್ತೆಯಾಗಿದ್ದ ಚೀನಾದ ವುಹಾನ್ ನಗರದಲ್ಲಿ ಸೋಂಕು ಹರಡುವಿಕೆ ತಡೆಗಟ್ಟುವಲ್ಲಿ ಸಂಪೂರ್ಣ ಯಶಸ್ವಿಯಾಗಿರುವ ಚೀನಾವನ್ನು ವಿಶ್ವ ಆರೋಗ್ಯ ಸಂಘಟನೆಯೂ (ಡಬ್ಲ್ಯುಎಚ್ಒ) ಶ್ಲಾಘಿಸಿದ್ದು ಇದರೊಂದಿಗೆ ತುರ್ತು ಕ್ರಮಗಳನ್ನು ಕೈಗೊಂಡಿದ್ದರೆ ಮತ್ತಷ್ಟು ಸಾವು-ನೋವನ್ನು ತಪ್ಪಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದೆ.
ಡಬ್ಲ್ಯುಎಚ್ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಅವರು ವುಹಾನ್ ವಿಶ್ವದ ಇತರ ಪ್ರದೇಶಗಳಿಗೆ ಭರವಸೆಯಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.
ಹಾಗೆಯೇ ಜನವರಿ ಕೊನೆಯಿಂದ ವುಹಾನ್ ಮತ್ತು ಸುತ್ತಲಿನ ಹುಬೈ ಪ್ರಾಂತ್ಯದಲ್ಲಿ ಬಂದ್ ವಾತಾವರಣವಿದ್ದು, ಇದೀಗ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣದ ಮೇಲಿನ ನಿರ್ಬಂಧವನ್ನು ಕೊಂಚ ಸಡಿಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.
ಆದರೆ, ಇತರ ದೇಶಗಳಿಂದ ಬಂದವರಿಂದ ಸೋಂಕು ಹರಡುವುದನ್ನು ತಡೆಯಲು ನಿರ್ಬಂಧಗಳನ್ನು ಹೆಚ್ಚಿಸಲಾಗಿದೆ.