ಒಟ್ಟಾವ, ಮಾ.13 (DaijiworldNews/PY) : ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಪತ್ನಿ ಸೋಫಿ ಗ್ರೆಗೊರಿ ಟ್ರುಡೊ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ದೃಢಪಟ್ಟಿದೆ ಎಂದು ಪ್ರಧಾನಮಂತ್ರಿ ವಕ್ತಾರರು ತಿಳಿಸಿದ್ದಾರೆ.
ಕೊರೊನಾ ವೈರಸ್ ಪತ್ತೆ ಪರೀಕ್ಷೆಗೆ ಸೋಫಿ ಗ್ರೆಗೊರಿ ಟ್ರುಡೊ ಅವರನ್ನು ಒಳಪಡಿಸಲಾಗಿತ್ತು. ಕೊರೊನಾ ವೈರಸ್ ಸೋಂಕು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಪ್ರಧಾನಮಂತ್ರಿ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅವರು ಸದ್ಯಕ್ಕೆ ವೈದ್ಯಕೀಯ ಸಲಹೆಯ ಮೇರೆಗೆ ಪ್ರತ್ಯೇಕವಾಗಿರುತ್ತಾರೆ. ವೈದ್ಯರು ತಿಳಿಸಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತರಗೆದುಕೊಳ್ಳುತ್ತಿದ್ದಾರೆ ಹಾಗೂ ಸೋಂಕು ಪೀಡಿತ ಲಕ್ಷಣಗಳು ಮಂದಗತಿಯಲ್ಲಿವೆ ಎಂದು ಹೇಳಿದೆ.
ಪ್ರಧಾನಿ ಜಸ್ಟಿನ್ ಟ್ರುಡೊ ಅವರಲ್ಲಿ ರೋಗದ ಯಾವುದೇ ಗುಣಲಕ್ಷಣಗಳು ಕಂಡುಬಂದಿಲ್ಲ. ಅವರು ಆರೋಗ್ಯವಾಗಿದ್ದಾರೆ. ಅವರು ವೈದ್ಯರ ಸಲಹೆ ಮೇರೆಗೆ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ 14 ದಿನಗಳು ಪತ್ನಿಯಿಂದ ದೂರವಿರುವುದಾಗಿಯೂ ಪ್ರಕಟಿಸಿದ್ಧಾರೆ. ಆದರೆ, ಪರೀಕ್ಷೆಗೆ ಒಳಗಾಗುವುದಿಲ್ಲ. ತಮ್ಮ ಕರ್ತವ್ಯವನ್ನು ಪ್ರಧಾನಮಂತ್ರಿಗಳು ಸಂಪೂರ್ಣವಾಗಿ ಮುಂದುವರಿಸುತ್ತಾರೆ ಹಾಗೂ ಕೆನಡಿಯನ್ನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹೇಳಿದೆ.
ಬುಧವಾರ ಬ್ರಿಟನ್ನಿಂದ ಟ್ರೂಡೊ ಹಾಗೂ ಅವರ ಪತ್ನಿ ವಾಪಾಸ್ ಆದಾಗಿನಿಂದ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಈ ಸಂದರ್ಭ ಸೋಫಿ ಗ್ರೆಗೊರಿ ಟ್ರುಡೊ ಅವರು ಕೊರೊನಾ ವೈರಸ್ ಸೋಂಕು ಒಳಗಾದ ನಂತರ ಸ್ವಯಂ ಆಗಿ ಪರಸ್ಪರ ದೂರವಿರುವುದಾಗಿ ಮಾ.12 ಗುರುವಾರ ಘೋಷಿಸಿದ್ದರು.