ದುಬೈ, ಮಾ 5 (Daijiworld News/MSP): ಎರಡು ತಿಂಗಳ ಹಿಂದೆ ಚೀನದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ಇದೀಗ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಭಾರತದಲ್ಲೂ ಇದೀಗ ಸೋಂಕು ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇನ್ನೊಂದೆಡೆ ದುಬೈನ ಇಂಡಿಯನ್ ಹೈ ಗ್ರೂಪ್ ಆಫ್ ಸ್ಕೂಲ್ ಗುರುವಾರದಿಂದ ಮುಚ್ಚಲಾಗುತ್ತಿದೆ ಎಂದು ಶಾಲಾ ಆಡಳಿತ ಮಂಡಳಿ ಪೋಷಕರಿಗೆ ತಿಳಿಸಿದೆ.
ಕೊರೋನಾ ಮುನ್ನೆಚ್ಚರಿಕಾ ಕ್ರಮವಾಗಿ ಐಎಚ್ಎಸ್ ಗ್ರೂಪ್ ಆಫ್ ಸ್ಕೂಲ್ಗಳನ್ನು ಮಾರ್ಚ್ 5ರ ಗುರುವಾರದಿಂದ ಮುಚ್ಚಲಾಗುತ್ತಿದೆ ಎಂದು ತಿಳಿಸಿದೆ. ಇನ್ನು ವಿದ್ಯಾರ್ಥಿಗಳ ಶಾಲಾ ಪರೀಕ್ಷೆಗಳ ಕುರಿತಾದ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ.
ಇಂಡಿಯನ್ ಹೈ ಗ್ರೂಪ್ ಆಫ್ ಸ್ಕೂಲ್ ಕ್ಯಾಂಪಸ್ 3 ವಿಭಾಗಗಳನ್ನುಹೊಂದಿದ್ದು,ಜೂನಿಯರ್ ಕ್ಯಾಂಪಸ್, ಗಾರ್ಹೌಡ್ ಮತ್ತು ಇಂಟರ್ನ್ಯಾಶನಲ್ ಸ್ಕೂಲ್ ಕ್ಯಾಂಪಸ್ ಅನ್ನುವ ವಿಭಾಗಗಳನ್ನು ಒಳಗೊಂಡಿದೆ. ಈ ಕ್ಯಾಂಪಸ್ ನಲ್ಲಿ ಓದುತ್ತಿದ್ದ ವಿದ್ಯಾರ್ಥಿಯೋಬ್ಬನಿಗೆ ಕೊರೊನಾ ಸೋಂಕು ತಗುಲಿರುವ ಸಂಶಯ ಇರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ. ಶಂಕಿತ ಕೊರೊನಾ ಪೀಡಿತ ವಿದ್ಯಾರ್ಥಿಯನ್ನು ತೀವ್ರ ನಿಗಾದಲ್ಲಿರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಗೆ ಶಂಕಿತ ಸೋಂಕು ಕಾಣಿಸಿಕೊಂಡ ಸಂದೇಶಗಳು ವಾಟ್ಸಾಪ್ನಲ್ಲಿ ಹರಿದಾಡಿದ ಬಳಿಕ ಅನೇಕ ಪೋಷಕರು ಭಯಭೀತರಾಗಿದ್ದರು.