ದುಬೈ, ಡಿ 28 (Daijiworld News/MSP): ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಭಾರತೀಯ ವ್ಯಕ್ತಿಯೊಬ್ಬ ದುಬೈನಲ್ಲಿ ವಿಚಾರಣೆಗೆ ಒಳಗಾಗಿದ್ದಾನೆ.
"35 ವರ್ಷದ ಮಹಿಳೆಯೊಬ್ಬಳು ಭಾರತೀಯ ವ್ಯಕ್ತಿಯೊಬ್ಬ ಮೇಲೆ ಈ ಆರೋಪ ಹೊರಿಸಿದ್ದು, ಅಗಸ್ಟ್ ತಿಂಗಳಲ್ಲಿ ದುಬೈನ ಡ್ರ್ಯಾಗನ್ ಮಾರ್ಟ್ ನಲ್ಲಿ ಶಾಪಿಂಗ್ ನಲ್ಲಿ ನಿರತಳಾಗಿದ್ದಾಗ 33 ವರ್ಷದ ಆರೋಪಿ ತನ್ನನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ: ಎಂದು ಹೇಳಿರುವುದನ್ನು ಎಂದು ಗಲ್ಫ್ ನ್ಯೂಸ್ ಶನಿವಾರ ವರದಿ ಮಾಡಿದೆ.
ನನ್ನ ಮಕ್ಕಳೊಂದಿಗೆ ಮಾಲ್ ನಲ್ಲಿ ಕೆಲವು ಆಟಿಕೆಗಳನ್ನು ಖರೀದಿಸುತ್ತಿದ್ದಾಗ ನಾನು ಆರೋಪಿಯನ್ನು ಮೊದಲ ಬಾರಿ ಗಮನಿಸಿದ್ದೆ. ಆ ಬಳಿಕ ಆತ ನಾನು ಹೆದರುವಂತೆ ನನ್ನನ್ನೇ ದಿಟ್ಟಿಸುತ್ತಿದ್ದ. ಸ್ವಲ್ಪ ಸಮಯದ ಬಳಿಕ ನನ್ನ ಹಿಂದೆ ನಿಂತು ನಾನು ವಿವಸ್ತ್ರವಾಗಿ ನಿಂತಿರುವಂತೆ ಆತ ನನ್ನ ದೇಹವನ್ನು ಪರೀಕ್ಷಿಸುತ್ತಲೇ ಇದ್ದ ಎಂದು ಮಹಿಳೆ ಘಟನೆಯ ಬಗ್ಗೆ ವಿವರಿಸಿದ್ದಾಳೆ.
ಆರೋಪಿ ಮಹಿಳೆಯನ್ನು ಬಲವಂತವಾಗಿ ಮುಟ್ಟಲು ಪ್ರಯತ್ನಿಸಿದಾಗ ಆಕೆ ಜೋರಾಗಿ ಕಿರುಚಿದ್ದಾಳೆ. ಈ ವೇಳೆ ಮಾಲ್ ನಲ್ಲಿದ್ದ ಇತರ ಗ್ರಾಹಕರು ಪೊಲೀಸರು ಬಂದು ಬಂಧಿಸುವವರೆಗೂ ಆತ ಓಡಿ ಹೋಗದಂತೆ ತಡೆದಿದ್ದಾರೆ.
ವಿಚಾರಣೆ ವೇಳೆ ದೂರುದಾರ ಮಹಿಳೆಯನ್ನು ಸ್ಪರ್ಶಿಸಿದ್ದನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ.ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಪ್ರತಿವಾದಿಗೆ ಮಹಿಳೆಯನ್ನು ಲೈಂಗಿಕ ದೌರ್ಜನ್ಯ ಎಸಗಿದೆ ಎಂದು ಆರೋಪಿಸಿದೆ.