ವಾಷಿಂಗ್ಟನ್, ಅ.18(Daijiworld News/SS): ಅಂತಾರಾಷ್ಟ್ರೀಯ ಹಣಕಾಸು ನಿಧಿ ಭಾರತದಲ್ಲಿ ಆರ್ಥಿಕಾಭಿವೃದ್ಧಿ ದರ ಕಡಿಮೆಯಾಗಿದೆ ಎಂದು ಹೇಳಿದೆ. ಆದರೆ ನಮ್ಮ ದೇಶದ ಆರ್ಥಿಕತೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ವಾಷಿಂಗ್ಟನ್'ನಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕಳೆದ ವರ್ಷ ಭಾರತದ ಆರ್ಥಿಕಾಭಿವೃದ್ಧಿ ದರ ಶೇಕಡಾ 6.8ರಷ್ಟಾಗಿತ್ತು. ಐಎಂಎಫ್ ಇತ್ತೀಚೆಗೆ ಬಿಡುಗಡೆ ಮಾಡಿದ 'ಎಕನಾಮಿಕ್ ಔಟ್ ಲುಕ್' ಪುಸ್ತಕದಲ್ಲಿ ಈ ವರ್ಷ ಭಾರತದ ಆರ್ಥಿಕಾಭಿವೃದ್ಧಿ ಶೇಕಡಾ 6.1ರಷ್ಟಾಗಿದೆ ಎಂದು ಹೇಳಿದ್ದು ಮುಂದಿನ ವರ್ಷ ಶೇಕಡಾ 7ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಅಂದಾಜು ಮಾಡಿದೆ ಎಂದು ತಿಳಿಸಿದರು.
ವಿಶ್ವದಲ್ಲಿ ಅತ್ಯಂತ ವೇಗವಾಗಿ ಆರ್ಥಿಕಾಭಿವೃದ್ಧಿ ಹೊಂದುತ್ತಿರುವ ದೇಶ ಭಾರತವಾಗಿದ್ದು, ಇನ್ನಷ್ಟು ವೇಗವಾಗಿ ಬೆಳೆಯುವಂತೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಸಹಜವಾಗಿ ಭಾರತದ ಆರ್ಥಿಕ ಕುಸಿತ ವಿಚಾರ ಚರ್ಚೆಗೆ ಬಂದಿದೆ. ಭಾರತ ಮತ್ತು ಚೀನಾ ದೇಶಗಳ ಆರ್ಥಿಕ ಬೆಳವಣಿಗೆ ಶೇಕಡಾ 6.1ರಷ್ಟಿದೆ ಎಂದು ಹೇಳಿದರೂ ನಾನು ಭಾರತವನ್ನು ಚೀನಾ ಜೊತೆ ಹೋಲಿಕೆ ಮಾಡಲು ಹೋಗುವುದಿಲ್ಲ. ಎಲ್ಲಾ ಜಾಗತಿಕ ಆರ್ಥಿಕತೆಯ ಅಭಿವೃದ್ಧಿ ದರವನ್ನು ಐಎಂಎಫ್ ಕಡಿಮೆ ಮಾಡಿ ಹೇಳಿದೆ. ಭಾರತಕ್ಕೆ ಕೂಡ ಅದೇ ರೀತಿ ಹೇಳಿದೆ. ಆದರೂ ಭಾರತದ ಆರ್ಥಿಕ ದರ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ ಎಂದು ಹೇಳಿದರು.