ತೆಹ್ರಾನ್, ಅ.12(Daijiworld News/SS): ಸೌದಿ ಅರೇಬಿಯಾದ ತೀರ ಪ್ರದೇಶದಲ್ಲಿ ಇರಾನ್ಗೆ ಸೇರಿದ ತೈಲ ಟ್ಯಾಂಕರ್ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಸೌದಿ ಅರೇಬಿಯಾದ ಬಂದರು ನಗರ ಜೆಡ್ಡಾ ಸಮೀಪ ತೈಲ ಟ್ಯಾಂಕರ್ನಲ್ಲಿಭಾರಿ ಸ್ಫೋಟ ಸಂಭವಿಸಿ ಅದು ಹೊತ್ತಿ ಉರಿದಿದ್ದು, ಕ್ಷಿಪಣಿ ದಾಳಿಯೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಸ್ಫೋಟದಿಂದ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿಯಿಂದಾಗಿ ಹಡಗಿಗೆ ಭಾರಿ ಹಾನಿಯುಂಟಾಗಿದ್ದು, ಕಚ್ಚಾ ತೈಲ ಸಮುದ್ರಕ್ಕೆ ಸೋರಿಕೆಯಾಗುತ್ತಿದೆ. ಶಂಕಿತ ದಾಳಿಯು ಕೆಂಪು ಸಮುದ್ರ ಮತ್ತು ಗಲ್ಫ್ ವ್ಯಾಪ್ತಿಯಲ್ಲಿ ಸಂಚರಿಸುವ ತೈಲ ಟ್ಯಾಂಕರ್ಗಳನ್ನು ಗುರಿಯಾಗಿಸಿಕೊಂಡು ನಡೆದಿದೆ ಎಂದು ಹೇಳಲಾಗುತ್ತಿದೆ.
ಸೆ.14 ರಂದು ಕೂಡ ಸೌದಿ ಅರೇಬಿಯಾದ ಎರಡು ತೈಲ ಸಂಗ್ರಹಾಗಾರಗಳ ಮೇಲೆ ದಾಳಿ ನಡೆಸಲಾಗಿತ್ತು. ದಾಳಿ ಬಳಿಕ ಇರಾನ್ ಹಾಗೂ ಸೌದಿ ಅರೇಬಿಯಾದ ನಡುವಿನ ಪರಿಸ್ಥಿತಿ ಉದ್ವಿಗ್ನಗೊಂಡಿದೆ.