ಸ್ಟಾಕ್ಹೋಂ, ಅ.11(Daijiworld News/SS): ಇಥಿಯೋಪಿಯಾ ಪ್ರಧಾನಮಂತ್ರಿ ಅಬಿ ಅಹಮದ್ ಅಲಿ ಅವರಿಗೆ ಈ ಸಲದ ನೊಬೆಲ್ ಶಾಂತಿ ಪುರಸ್ಕಾರ ಘೋಷಣೆ ಆಗಿದೆ.
ಪ್ರಧಾನಮಂತ್ರಿಯಾಗಿ ಅಲಿ ಅವರು ದೇಶದ ಸಾರ್ವಭೌಮತೆ, ಸಮಗ್ರತೆ ಮತ್ತು ಸಾಮಾಜಿಕ ನ್ಯಾಯ ವಿಚಾರಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದಾರೆ. ಇವನ್ನೆಲ್ಲ ಗುರುತಿಸುವ ಸಲುವಾಗಿ ಆಯ್ಕೆ ಸಮಿತಿ ಅಲಿ ಅವರ ಹೆಸರನ್ನು ಪ್ರಶಸ್ತಿಗೆ ಅಂತಿಮಗೊಳಿಸಿರುವುದಾಗಿ ನಾರ್ವೆಯನ್ ನೊಬೆಲ್ ಕಮಿಟಿ ತಿಳಿಸಿದೆ.
ಇಥಿಯೋಪಿಯಾದ ನೆರೆರಾಷ್ಟ್ರವಾಗಿರುವ ಎರಿಟ್ರಿಯಾ ಜತೆಗಿನ ಗಡಿ ವಿವಾದ ಇತ್ಯರ್ಥಗೊಳಿಸುವಲ್ಲಿ ಅವರು ತೆಗೆದುಕೊಂಡ ನಿರ್ಣಾಯಕ ನಿಲುವು ಅವರನ್ನು ಈ ಪ್ರಶಸ್ತಿಗೆ ಪರಿಗಣಿಸುವಂತೆ ಮಾಡಿತು ಎಂದು ಹೇಳಿದೆ.
ಇಥಿಯೋಪಿಯಾ ಮತ್ತು ಎರಿಟ್ರಿಯಾ ನಡುವಿನ ದೀರ್ಘಕಾಲದ ಬಿಕ್ಕಟ್ಟು ಶಮನಗೊಳಿಸುವುದಕ್ಕಾಗಿ ಈ ವರ್ಷ ಅಲಿ ಅವರು ಹಾಕಿಕೊಂಡ ಶಾಂತಿ ನೀತಿಯ ಒಪ್ಪಂದ ಫಲಕೊಟ್ಟಿತ್ತು. ಇದಕ್ಕಾಗಿ ಅವರು ಎರಿಟ್ರಿಯಾದ ಅಧ್ಯಕ್ಷ ಇಸಾಯಸ್ ಅರ್ಫ್ವರಿಕಿ ಜತೆಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು.