ವಾಷಿಂಗ್ಟನ್, ಅ.08(Daijiworld News/SS): ಕಾಶ್ಮೀರದಲ್ಲಿ ಸಂವಹನ ಮತ್ತು ಸಂಪರ್ಕ ಸಾಧನಗಳನ್ನು ಕಡಿತ ಮಾಡಿರುವುದರಿಂದ ಜನರ ದಿನನಿತ್ಯದ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಅಮೆರಿಕಾ ಹೇಳಿದೆ.
ಸಾಮಾನ್ಯ ಜನರ ದಿನನಿತ್ಯ ಜೀವನದ ಮೇಲೆ ಪರಿಣಾಮ ಬೀರುವುದರಿಂದ ಕಾಶ್ಮೀರ ಕಣಿವೆಯಲ್ಲಿ ಹೇರಲಾಗಿರುವ ಸಂವಹನ ಕಡಿತವನ್ನು ತೆಗೆದುಹಾಕುವಂತೆ ಅಮೆರಿಕಾದ ವಿದೇಶಾಂಗ ವ್ಯವಹಾರಗಳ ಸಮಿತಿ ಒತ್ತಾಯಿಸಿದೆ. ಕಾಶ್ಮೀರಿಗಳ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಮಿತಿ ಹೇಳಿದೆ.
ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಮೇಲೆ ಹೇರಲಾಗಿರುವ ಮೂಲಭೂತ ಸೌಕರ್ಯಗಳ ನಿರ್ಬಂಧವನ್ನು ತೆಗೆದುಹಾಕಿ ಭಾರತದ ಬೇರೆ ಪ್ರದೇಶಗಳ ಜನರಿಗೆ ಸಿಗುತ್ತಿರುವ ಹಕ್ಕುಗಳಿಗೆ ಕಾಶ್ಮೀರಿ ಜನರು ಕೂಡ ಸಮಾನ ಪಾಲುದಾರರು ಎಂದು ತೋರಿಸಲು ಇದು ಸೂಕ್ತ ಸಮಯ ಎಂದು ಹೇಳಿದೆ.
ಕಳೆದ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಸಂವಿಧಾನ ವಿಧಿ 370 ರದ್ದುಪಡಿಸಿ ಜಮ್ಮು-ಕಾಶ್ಮೀರ ಇಬ್ಭಾಗ ಮಾಡಿ ಅದು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳು ಎಂದು ಘೋಷಣೆ ಮಾಡಿದ ನಂತರ ಇಲ್ಲಿ ನಿಷೇಧ ಹೇರಲಾಗಿದೆ. ಜಮ್ಮು-ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮ ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯವಾಗಿದ್ದು ಪಾಕಿಸ್ತಾನ ಕಡೆಯಿಂದ ಭಯೋತ್ಪಾದಕರು ಮತ್ತು ಪ್ರಾಕ್ಸಿಗಳ ತೊಂದರೆ, ಕಿರುಕುಳವನ್ನು ತಪ್ಪಿಸಲು ಇದು ಅನಿವಾರ್ಯವಾಗಿತ್ತು ಎಂದು ಭಾರತ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡು ಬಂದಿದೆ.