ನ್ಯೂಯಾರ್ಕ್, ಅ.07(Daijiworld News/SS): ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಇದೇ ಮೊದಲ ಬಾರಿಗೆ ಸಂಪೂರ್ಣ ಮಹಿಳಾ ತಂಡವನ್ನು ಬಾಹ್ಯಾಕಾಶಕ್ಕೆ ಕಳಿಸಲಿದೆ.
15 ಮಹಿಳಾ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ದುರಸ್ತಿ ಮತ್ತು ಅಭಿವೃದ್ಧಿ ಕಾರ್ಯ ನಡೆಸಲಿದ್ದಾರೆ. ಅ.21ರಂದು ಈ ತಂಡ ವಿವಿಧ ಹಂತ ಹಾಗೂ ವಿಭಾಗಗಳಲ್ಲಿ ಅಂತರಿಕ್ಷದಲ್ಲಿ ಕೆಲಸ ನಿರ್ವಹಿಸಲಿದೆ. ನಾಸಾ ಕಳೆದ ಮಾರ್ಚ್'ನಲ್ಲೇ ಮಹಿಳಾ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆ ಹಾಕಿಕೊಂಡಿತ್ತು. ಸ್ಪೇಸ್ ಸೂಟ್'ಗಳ ಕೊರತೆಯಿಂದಾಗಿ ಯೋಜನೆಯನ್ನು ಕೆಲಕಾಲ ಮುಂದೂಡಬೇಕಾಯಿತು.
ಇದೀಗ ಯೋಜನೆಯನ್ನು ಹೊಸದಾಗಿ ರೂಪಿಸಲಾಗಿದೆ. ಈ ಹಿಂದೆ ಬಾಹ್ಯಾಕಾಶಕ್ಕೆ ತೆರಳಿದ ಅನುಭವ ಹೊಂದಿರುವ ಜೆಸ್ಸಿಕಾ ಮಿರ್ ಹಾಗೂ ಕ್ರಿಸ್ಟಿನಾ ಕೋಚ್ ಈ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ನಾಸಾ ತಿಳಿಸಿದೆ. ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಮತ್ತು ನಿರ್ವಹಣೆಗಾಗಿ ಈವರೆಗೆ 200ಕ್ಕೂ ಹೆಚ್ಚು ಬಾರಿ ಬಾಹ್ಯಾಕಾಶ ಯಾನ ಕೈಗೊಳ್ಳಲಾಗಿದೆ. ಆದರೆ ಇದೇ ಮೊದಲ ಬಾರಿಗೆ ಕೇವಲ ಮಹಿಳಾ ಗಗನಯಾತ್ರಿಗಳನ್ನು ಒಳಗೊಂಡ ತಂಡ ಈ ಕೆಲಸ ನಿರ್ವಹಿಸಲಿದೆ.