ದುಬೈ, ಅ.04(Daijiworld News/SS): ಯುಎಇ ಗಗನಯಾತ್ರಿ ಹಜ್ಜಾ ಅಲ್ ಮನ್ಸೂರಿ ಅವರು ಬಾಹ್ಯಾಕಾಶ ಕೇಂದ್ರದಿಂದ ಇಸ್ಲಾಂನ ಪವಿತ್ರ ತಾಣವಾದ ಮೆಕ್ಕಾದ ಅದ್ಭುತ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ಚಿತ್ರ ಸಾಕಷ್ಡು ವೈರಲ್ ಆಗುತ್ತಿದೆ.
ಹಜ್ಜಾ ಅಲ್ ಮನ್ಸೂರಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಸೀದಿಯ ( ಮಕ್ಕಾ ಮಸ್ಜಿದುಲ್ ಹರಾಮ್) ಅದ್ಭುತ ಚಿತ್ರವನ್ನು ಹಂಚಿಕೊಂಡು, ಇದು ಮುಸ್ಲಿಮರ ಹೃದಯದಲ್ಲಿ ವಾಸಿಸುವ ಸ್ಥಳವಾಗಿದೆ. ಮತ್ತು ಅವರು ಪ್ರಾರ್ಥನೆಗಾಗಿ ಇಲ್ಲಿ ಸೇರುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಗಗನಯಾತ್ರೆಯಲ್ಲಿ ಹಜ್ಜಾ ಅಲ್ ಮನ್ಸೂರಿ ಪ್ರಮುಖ ಗಗನಯಾತ್ರಿಯಾಗಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಗಗನ ಯಾತ್ರೆಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಇದೇ ಏಪ್ರಿಲ್ನಲ್ಲೇ ನಡೆಸಲು ಈ ಮುನ್ನ ನಿರ್ಧರಿಸಿತ್ತು. ಆದರೆ, ಕಳೆದ ಅಕ್ಟೋಬರ್'ನಲ್ಲಿ ಸೊಯುಜ್ ಎಂಎಸ್-10 ಬಾಹ್ಯಾಕಾಶ ನೌಕೆ ವಿಫಲಗೊಂಡ ಹಿನ್ನೆಲೆಯಲ್ಲಿ ಗಗನಯಾತ್ರೆಯನ್ನು ಮುಂದೂಡಲಾಗಿತ್ತು. ಯುಎಇನ ಮೊದಲ ಗಗನಯಾತ್ರಿಯನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕಳುಹಿಸಲು ಕಳೆದ ಜೂನ್ನಲ್ಲಿ ಎಂಬಿಆರ್ ಎಸ್ ಸಿ ಹಾಗೂ ರಷ್ಯಾದ ರೊಸ್ಕಾಸ್ಮೋಸ್ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದೀಗ ಎಂಟು ದಿನಗಳ ಕಾರ್ಯಾಚರಣೆಯ ನಂತರ ಮನ್ಸೂರಿ ಭೂಮಿಗೆ ಮರಳಿದ್ದಾರೆ.