ವಾಷಿಂಗ್ಟನ್, ಅ.03(Daijiworld News/SS): ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯನ್ನು ಮಾಡಲು ಯತ್ನಿಸುತ್ತಿದ್ದೇವೆ. ಇದು ಸಾಧ್ಯವಾದರೆ ಕಳೆದ 70 ವರ್ಷಗಳಲ್ಲಿ ಪಾಕಿಸ್ತಾನಿಗಳು ಯೋಜಿಸಿರುವ ಎಲ್ಲ ತಂತ್ರಗಳು ವ್ಯರ್ಥವಾಗಲಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ಭಾರತದ ಸನ್ನಿವೇಶಗಳ ನಡುವೆ ಹೋಲಿಕೆ ಮಾಡಲು ಪ್ರಯತ್ನಿಸುತ್ತಿರುವ ಅವರು, ಈಶಾನ್ಯ ಭಾರತ ಇಂದು "ಬಹುಮಟ್ಟಿಗೆ ಶಾಂತಿಯುತವಾಗಿದೆ". ಅದಕ್ಕೆ ಕಾರಣ ಅಭಿವೃದ್ಧಿ. ಹಾಗೆಯೇ ಕಾಶ್ಮೀರ ಕೂಡ ಮುಂದೊಂದು ದಿನ ಶಾಂತಿಯುತವಾಗಲಿದೆ ಎಂದು ಹೇಳಿದ್ದಾರೆ.
ಈಶಾನ್ಯ ಪ್ರದೇಶದಲ್ಲೂ, ಭಾರತವು ತುಂಬಾ ಕಷ್ಟಕರವಾದ ಪರಿಸ್ಥಿತಿಯನ್ನು ನಿಭಾಯಿಸಿದೆ. ಇಂದು ನೀವು ಈಶಾನ್ಯವನ್ನು ನೋಡಿದರೆ ಅದು ಬಹುಮಟ್ಟಿಗೆ ಶಾಂತಿಯುತವಾಗಿದೆ. ಈಶಾನ್ಯ ಪ್ರದೇಶದ ಜನರು 'ಲಾಭದಾಯಕ ಜೀವನೋಪಾಯ'ದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರು "ಭದ್ರತಾ ಪಡೆಗಳ ಮೇಲೆ ಕಲ್ಲು ಎಸೆಯುವುದಿಲ್ಲ" ಎಂದು ಹೇಳಿದರು.
ಅಭಿವೃದ್ಧಿ ವಾಸ್ತವವಾಗಿ ಈಶಾನ್ಯದಲ್ಲಿ ಕೆಲಸ ಮಾಡಿದೆ. ರಾಷ್ಟ್ರೀಯ ಪಕ್ಷಗಳು ಇಂದು ಸಾಕಷ್ಟು ಬೆಂಬಲವನ್ನು ಹೊಂದಿರುವುದರಿಂದ ರಾಜಕೀಯ ಮುಖ್ಯವಾಹಿನಿಯಲ್ಲೂ ಇದು ಬಹಳ ಬಲವಾಗಿ ಕೆಲಸ ಮಾಡಿದೆ ಎಂದು ತಿಳಿಸಿದರು.