ಸೌದಿ, ಅ.03(Daijiworld News/SS): ಸೌದಿ ಅರೇಬಿಯಾಕ್ಕೆ ತೆರಳಿರುವ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಭೇಟಿಯಾಗಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಜಮ್ಮು-ಕಾಶ್ಮೀರ ಸೇರಿ ಹಲವಾರು ದ್ವಿಪಕ್ಷೀಯ ಹಾಗೂ ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
370ನೇ ವಿಧಿಯನ್ನು ರದ್ದು ಮಾಡಿದ ಭಾರತದ ನಿಲುವನ್ನು ನಾವು ಅರ್ಥೈಸಿಕೊಂಡಿದ್ದೇವೆ ಎಂದು ಹೇಳುವ ಮೂಲಕ ಸೌದಿ ರಾಜಕುಮಾರ ಮೊಹಮದ್ ಪರೋಕ್ಷವಾಗಿ ಭಾರತವನ್ನು ಬೆಂಬಲಿದ್ದಾರೆ.
ಅಜಿತ್ ದೋವೆಲ್ ಸೌದಿಯ ರಾಜಕೀಯ ಮತ್ತು ಭದ್ರತಾ ವ್ಯವಹಾರಗಳ ಮುಖ್ಯಸ್ಥ ಮುಸೈದ್ ಅಲ್ ಅಲ್ಬಾನ್ ಜೊತೆಗೂ ಮಾತುಕತೆ ನಡೆಸಿದ್ದು, ಭದ್ರತಾ ವ್ಯವಹಾರಗಳಲ್ಲಿ ಎರಡೂ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ತೀರ್ಮಾನಿಸಿದ್ದಾರೆ.
ಕೆಲ ದಿನಗಳ ಹಿಂದೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರ ವಿಷಯದಲ್ಲಿ ಬೆಂಬಲ ಪಡೆಯಲು ಸೌದಿಗೆ ಭೇಟಿ ನೀಡಿದ್ದರು. ಆದರೆ ಈ ಪ್ರಯತ್ನ ಈಗ ವಿಫಲವಾದಂತಾಗಿದೆ. ಕಳೆದ ಕೆಲ ವರ್ಷಗಳಿಂದ ಸೌದಿ ಅರೇಬಿಯಾದ ಜೊತೆ ಸ್ನೇಹವನ್ನು ಗಟ್ಟಿಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಭದ್ರತೆ, ಗುಪ್ತಚರ ವಿಭಾಗದಲ್ಲಿ ಸಹಕಾರವನ್ನು ಉತ್ತಮಗೊಳಿಸಿದ್ದಾರೆ.