ಯುನೈಟೆಡ್ ನೇಷನ್ಸ್, ಸೆ.28(Daijiworld News/SS): ಜಮ್ಮು-ಕಾಶ್ಮೀeರ ಮತ್ತು ಲಡಾಕ್ ಭಾರತದ ಆಂತರಿಕ ಭಾಗ ಎಂದು ಮತ್ತೊಮ್ಮೆ ಭಾರತ ಸ್ಪಷ್ಟಪಡಿಸಿದೆ.
ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಎತ್ತಿದ್ದ ಚೀನಾ, ವಿಶ್ವಸಂಸ್ಥೆಯ ಹಕ್ಕುಪತ್ರ, ಭದ್ರತಾ ಮಂಡಳಿ ನಿರ್ಣಯಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳ ಪ್ರಕಾರ ಕಾಶ್ಮೀರ ವಿವಾದವನ್ನು ಶಾಂತಿಯುತವಾಗಿ ಮತ್ತು ಸರಿಯಾಗಿ ಬಗೆಹರಿಸಬೇಕು. ಕಾಶ್ಮೀರದ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಒತ್ತಿ ಹೇಳಿದೆ. ಆದರೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಷಣದ ವೇಳೆ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜಮ್ಮು-ಕಾಶ್ಮೀರ ಮತ್ತು ಲಡಾಕ್ ವಿಷಯಗಳನ್ನು ಪ್ರಸ್ತಾಪಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ಮಾತನಾಡಿರುವ ವಿದೇಶಾಂಗ ಸಚಿವಾಲಯ ವಕ್ತಾರ ರವೀಶ್ ಕುಮಾರ್, ಜಮ್ಮು-ಕಾಶ್ಮೀರ ಮತ್ತು ಲಡಾಕ್ ಭಾರತದ ಆಂತರಿಕ ಭಾಗ. ಇತ್ತೀಚೆಗೆ ಅಲ್ಲಿ ನಡೆದ ಘಟನೆಗಳು ಸಂಪೂರ್ಣವಾಗಿ ಭಾರತಕ್ಕೆ ಮಾತ್ರ ಸಂಬಂಧಿಸಿದ ವಿಷಯ. ಅದು ಚೀನಾಗೆ ಚೆನ್ನಾಗಿ ಅರಿವಿದೆ ಎಂದು ಹೇಳಿದ್ದಾರೆ.
ಭಾರತ ದೇಶದ ಸಾರ್ವಭೌಮತ್ವ ಮತ್ತು ಪ್ರಾಂತೀಯ ಆಂತರಿಕತೆಯನ್ನು ಬೇರೆ ದೇಶಗಳು ಗೌರವಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಕ್ರಮ ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ ಮೂಲಕ ಯಥಾಸ್ಥಿತಿಯನ್ನು ಬದಲಾಯಿಸುವ ಪ್ರಯತ್ನಗಳಿಂದ ದೂರವಿರಿ ಎಂದು ಹೇಳಿದರು.