ವಾಷಿಂಗ್ಟನ್, ಸೆ.27(Daijiworld News/SS): ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್'ನ್ನು ಸಂಪರ್ಕಿಸಲು ಇನ್ನೂ ಕೂಡ ಸಾಧ್ಯವಾಗಿಲ್ಲ. ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಇಸ್ರೋ ಸತತವಾಗಿ ಪ್ರಯತ್ನಿಸಿತ್ತು. ಈ ನಡುವೆ ಅಮೆರಿಕಾದ ನಾಸಾ ಸಹಾಯದಿಂದ ವಿಕ್ರಂ ಲ್ಯಾಂಡರ್'ನೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಇದೀಗ ಭಾರತದ ಮಹಾತ್ವಾಕಾಂಕ್ಷೆಯ ಚಂದ್ರಯಾನ-2 ಗಗನನೌಕೆಯನ್ನು ಹೊತ್ತೊಯ್ದಿದ್ದ ವಿಕ್ರಮ್ ಉಡ್ಡಯನ ವಾಹಕ ಚಂದ್ರನಲ್ಲಿ ಕಠಿಣ ಲ್ಯಾಂಡಿಂಗ್ (ಹಾರ್ಡ್)ನ್ನು ಕಂಡಿದೆ ಎಂದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ. ಮಾತ್ರವಲ್ಲ, ಮುಂದಿನ ತಿಂಗಳು ಅಕ್ಟೋಬರ್'ನಲ್ಲಿ ಹೆಚ್ಚು ಬೆಳಕಿನ ಸಮಯದಲ್ಲಿ ಇನ್ನಷ್ಟು ಚಿತ್ರಗಳು ಸಿಗಲಿದೆ ಎಂದು ನಾಸಾ ತಿಳಿಸಿದೆ.
ಇಸ್ರೊ ಸಂಸ್ಥೆಯ ಯೋಜನೆ ಪ್ರಕಾರ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಕಳೆದ ಸೆಪ್ಟೆಂಬರ್ 7ರಂದು ಸಾಫ್ಟ್ ಲ್ಯಾಂಡಿಂಗ್ ಆಗಬೇಕಾಗಿತ್ತು. ಆದರೆ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲ್ಮೈ ಮೇಲೆ ಇಳಿಸುವ ಕೊನೆ ಕ್ಷಣದಲ್ಲೇ ಅದರ ಸಂಪರ್ಕ ಕಡಿತಗೊಂಡಿತ್ತು.