ನ್ಯೂಯಾರ್ಕ್, ಸೆ.26(Daijiworld News/SS): ಕಾಶ್ಮೀರದ ವಿಷಯದಲ್ಲಿ ಜಾಗತಿಕ ಸಮುದಾಯ ಮೋದಿ ಮೇಲೆ ಒತ್ತಡ ಹೇರುತ್ತಿಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ.
ಕಾಶ್ಮೀರದ ವಿಷಯವನ್ನು ಜಾಗತಿಕ ವಿಷಯವನ್ನಾಗಿಸುವುದರಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂದು ಹೇಳಿರುವ ಇಮ್ರಾನ್ ಖಾನ್, ಕಾಶ್ಮೀರ ವಿಷಯದಲ್ಲಿ ವಿಶ್ವಸಮುದಾಯದ ಬಗ್ಗೆ ಬೇಸರವಿದೆ ಎಂದು ಹೇಳಿದ್ದಾರೆ.
ಮೋದಿ ಮೇಲೆ ಜಾಗತಿಕ ನಾಯಕರು ಒತ್ತಡ ಹೇರುತ್ತಿಲ್ಲ. ಭಾರತದ ವಿರುದ್ಧ ನಾವು ಯುದ್ಧ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೆ ಅಣ್ವಸ್ತ್ರ ಯುದ್ಧ, ಜಾಗತಿಕ ಮಟ್ಟದಲ್ಲಿ ಮುಸ್ಲಿಮರ ತೀವ್ರಗಾಮಿತ್ವ, ಕಾಶ್ಮೀರಕ್ಕಾಗಿ ಪ್ರಾದೇಶಿಕವಾಗಿ ಜನರು ದಂಗೆ ಏಳುತ್ತೇವೆ. ಕೂಡಲೇ ಅಂತಾರಾಷ್ಟ್ರೀಯ ಸಮುದಾಯ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ.
ಭಾರತದ ಆರ್ಥಿಕ ಸ್ಥಿತಿಗತಿ ಮತ್ತು ಜಾಗತಿಕ ಪ್ರಾಬಲ್ಯದ ಹಿನ್ನೆಲೆಯೂ ಜಾಗತಿಕ ಸಮುದಾಯದ ಮೇಲೆ ಪರಿಣಾಮ ಬೀರಿದೆ. ಹೀಗಾಗಿಯೇ ಕಾಶ್ಮೀರ ವಿಚಾರವಾಗಿ ಪಾಕಿಸ್ತಾನದ ಅಳಲು ಅಂತಾರಾಷ್ಟ್ರೀಯ ಸಮುದಾಯದ ಕಿವಿಗೆ ಬೀಳುತ್ತಿಲ್ಲ. ಅಂತಾರಾಷ್ಟ್ರೀಯ ಸಮುದಾಯದ ನಡೆಯಿಂದ ನನಗೆ ನಿರಾಸೆಯಾಗಿದೆ. ಪ್ರಧಾನಿ ಮೋದಿ ಅವರ ಮೇಲೆ ಇನ್ನೂ ಜಾಗತಿಕ ಸಮುದಾಯ ಒತ್ತಡ ಹೇರುತ್ತಿಲ್ಲ. ಆದರೆ ಪಾಕಿಸ್ತಾನ ಮಾತ್ರ ತನ್ನ ಪ್ರಯತ್ನವನ್ನು ಮುಂದುವರಿಸಲಿದೆ ತಿಳಿಸಿದ್ದಾರೆ.